ಇತ್ತೀಚಿನ ಸುದ್ದಿ
ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ: ಕೇಂದ್ರ ಸಚಿವ ಕುಮಾರಸ್ವಾಮಿ
29/09/2026, 21:34
ಬೆಂಗಳೂರು(reporterkarnataka.com): ರಾಜ್ಯ ಸರ್ಕಾರ ಯೋಜನೆಗಳ ಹೆಸರಿನಲ್ಲಿ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಸರ್ಕಾರವು ಗುಲಾಮಗಿರಿಯ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ ಅವರು, ಈ ಸಂಬಂಧ ದಾಖಲೆಗಳನ್ನು ಜನರ ಮುಂದಿಡುವುದಾಗಿ ಹೇಳಿದರು.
ನೈಸ್ ಯೋಜನೆ ಕುರಿತು ಮಾತನಾಡಿದ ಕುಮಾರಸ್ವಾಮಿ, 1995ರಿಂದ ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ ನಡೆದು ಬಂದಿರುವ ಹಾದಿಯ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಸಿದ್ಧವಿದ್ದರೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆ ನಡೆಸಲು ತಾವು ಸಿದ್ಧ ಎಂದು ಸವಾಲು ಹಾಕಿದರು.
1995ರ ಫೆಬ್ರವರಿ 20ರಂದು ವಿಹೆಚ್‌ಬಿ, ಕಲ್ಯಾಣಿ ಗ್ರೂಪ್ ಹಾಗೂ ಎಸ್‌ಎಬಿ ಇಂಜಿನಿಯರಿಂಗ್ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರು ಸಹಿ ಹಾಕಿದ್ದರು ಎಂದು ಅವರು ಹೇಳಿದರು. ಬಳಿಕ ಯೋಜನೆಗೆ ಭೂಮಿ, ಡಿಪಿಆರ್ ಹಾಗೂ ಲಾಭ-ನಷ್ಟದ ಕುರಿತು ಚರ್ಚೆ ನಡೆದಿದ್ದು, 1995ರ ನವೆಂಬರ್ 8ರಂದು ಐದು ಪಟ್ಟಣಗಳನ್ನು ಟೌನ್‌ಶಿಪ್‌ಗಳಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿತ್ತು ಎಂದು ವಿವರಿಸಿದರು.
ಯೋಜನೆಯಡಿ 30 ವರ್ಷಗಳ ಅವಧಿಗೆ ನಿರ್ವಹಣೆ ಹಾಗೂ ವೆಚ್ಚವನ್ನು ಭರಿಸಲು ಟೋಲ್ ಸಂಗ್ರಹಿಸುವುದು, ಭೂಸ್ವಾಧೀನದ ವೆಚ್ಚವನ್ನು ಯೋಜನಾ ಸಂಸ್ಥೆಯೇ ಭರಿಸುವುದು ಹಾಗೂ ಯೋಜನೆಯನ್ನು ಲಾಭದಾಯಕವಾಗಿಸಲು ಏಳು ಉಪನಗರಗಳನ್ನು ನಿರ್ಮಿಸುವ ಪ್ರಸ್ತಾವನೆ ಇತ್ತು ಎಂದು ಕುಮಾರಸ್ವಾಮಿ ತಿಳಿಸಿದರು.
1997ರಲ್ಲಿ ಜೆ.ಎಚ್. ಪಾಟೀಲ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಯೋಜನೆಗೆ ಸಂಬಂಧಿಸಿದಂತೆ ಮತ್ತೊಂದು ಒಪ್ಪಂದವಾಗಿತ್ತು. 1997ರ ಏಪ್ರಿಲ್ 3ರಂದು ಬೆಂಗಳೂರು–ಮೈಸೂರು ಕಾರಿಡಾರ್ ಯೋಜನೆಗೆ ಸಂಬಂಧಿಸಿದ ಒಪ್ಪಂದ ನಡೆದಿದ್ದು, ಭೂಸ್ವಾಧೀನ ಸಂದರ್ಭದಲ್ಲಿ ಫಲವತ್ತಾದ ಕೃಷಿ ಭೂಮಿಗಿಂತ ಒಣಭೂಮಿಯನ್ನು ಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಹೇಳಿದರು.
ನೈಸ್ ಯೋಜನೆಗೆ ಸಂಬಂಧಿಸಿದ ವಿಚಾರದಲ್ಲಿ ನ್ಯಾಯಾಲಯದ ಕೆಲವು ಅವಲೋಕನಗಳೂ ಇದ್ದು, ಸರ್ಕಾರದ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ ಎಂದು ಕುಮಾರಸ್ವಾಮಿ ಹೇಳಿದರು. 2ಜಿ ಹಾಗೂ ಕಲ್ಲಿದ್ದಲು ಹಗರಣಗಳಿಗಿಂತ ದೊಡ್ಡ ಹಗರಣ ಇದು ಎಂದು ಆರೋಪಿಸಿದ ಅವರು, ಈ ಕುರಿತು ಅಗತ್ಯ ದಾಖಲೆಗಳನ್ನು ಜನರ ಮುಂದೆ ಇಡುವುದಾಗಿ ತಿಳಿಸಿದರು.













