ಇತ್ತೀಚಿನ ಸುದ್ದಿ
ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ ಸಾವು
29/09/2026, 18:15
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಏಪ್ರಿಲ್ 2026 ರಿಂದ ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡು ಆನೆಯು ಇಲಾಖೆಯ ಸತತ ಐದು ತಿಂಗಳಿಗೂ ಹೆಚ್ಚಿನ ನಿರಂತರ ಚಿಕಿತ್ಸೆಯ ನಡುವೆಯೂ ಇಂದು ಮೃತಪಟ್ಟಿದೆ. ಕಾಡಿನಲ್ಲಿ ಕಾದಾಟದಿಂದ ಗಾಯಗಳು ಹಾಗೂ ಮೂಳೆ ಹಾಗೂ ದಂತ ಮುರಿತಕ್ಕೊಳಗಾಗಿದ್ದ ಆನೆಯನ್ನು ಶಿಬಿರಕ್ಕೆ ಕರೆದು ತರಲಾಗಿತ್ತು. ಅರಣ್ಯ ಇಲಾಖೆಯ ಪಶುವೈದ್ಯರು ಆನೆಯನ್ನು ಪ್ರತ್ಯೇಕವಾಗಿಟ್ಟು (ಕ್ವಾರಂಟೈನ್), ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಎಚ್ಚರವಹಿಸಿ, ಪ್ರತಿದಿನ ಆ್ಯಂಟಿಬಯೋಟಿಕ್ಸ್, ನೋವು ನಿವಾರಕಗಳು, ಗಾಯಕ್ಕೆ ಔಷಧೋಪಚಾರ ಮತ್ತು ಪೋಷಕಾಂಶಗಳನ್ನು ನಿರಂತರವಾಗಿ ನೀಡುತ್ತಿದ್ದರು.
ಹೆಚ್ಚಿನ ತಜ್ಞ ಚಿಕಿತ್ಸೆಗಾಗಿ, ‘ವೈಲ್ಡ್ಲೈಫ್ ಎಸ್.ಒ.ಎಸ್’ (Wildlife SOS) ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನು ಕರೆಸಿ ಜಂಟಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಡಿಜಿಟಲ್ ಎಕ್ಸ್-ರೇ ಪರೀಕ್ಷೆಯ ವೇಳೆ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ದೃಢಪಟ್ಟಿರುತ್ತದೆ. ತಜ್ಞ ವೈದ್ಯರ ಸಲಹೆಯಂತೆ ಎಲ್ಲಾ ಸುಧಾರಿತ ಚಿಕಿತ್ಸೆಗಳನ್ನು ಮುಂದುವರಿಸಲಾಗಿತ್ತು ಹಾಗೂ ಕಾಲಿನ ಮೇಲಿನ ಒತ್ತಡ ತಗ್ಗಿಸಲು ಆನೆಯನ್ನು ಕ್ರಾಲ್ನಿಂದ ಹೊರಗೆ ಬಿಡಲಾಗಿತ್ತು. ಅಲ್ಲದೆ, ಪೆಟ್ಟಾದ ಕಾಲನ್ನು ಸ್ಥಿರವಾಗಿಡಲು ದಿನಾಂಕ 27/09/2026 ರಂದು ನುರಿತ ತಜ್ಞರ ಮೂಲಕ ಫೈಬರ್ಗ್ಲಾಸ್ ಬ್ಯಾಂಡೇಜ್ (Fibre Casting) ಹಾಕಲಾಗಿತ್ತು.
ದಿನಾಂಕ 29/09/2026 ರಂದು ಆನೆಯು ಏಕಾಏಕಿ ಕುಸಿದು ಬಿದ್ದ ತಕ್ಷಣವೇ ತುರ್ತು ಗ್ಲುಕೋಸ್/ದ್ರವ ಚಿಕಿತ್ಸೆ (IV fluids) ಹಾಗೂ ತೀವ್ರ ನಿಗಾ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದೆ.

ಸಾವಿನ ನಿಖರ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ (Post-Mortem) ನಡೆಸಲಾಗುತ್ತಿದ್ದು, ದೀರ್ಘಕಾಲದ ಮೂಳೆ ಮುರಿತದ ತೊಂದರೆ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದಾಗಿ (Systemic exhaustion) ಆನೆಯು ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ಪಶುವೈದ್ಯಕೀಯ ವರದಿಗಳಿಂದ ತಿಳಿದುಬಂದಿದೆ.












