ಇತ್ತೀಚಿನ ಸುದ್ದಿ
ತಲಕಾವೇರಿ ಅನ್ನದಾನ ಮಹಾಯಜ್ಞ ಸಂಪನ್ನ: ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ ಅನ್ನಸಂತರ್ಪಣೆಗೆ ತೆರೆ
17/11/2026, 16:38
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ತಲಕಾವೇರಿಯ ಪವಿತ್ರ ಸನ್ನಿಧಿಯಲ್ಲಿ ಕೊಡಗು ಏಕೀಕರಣ ರಂಗದ ವತಿಯಿಂದ ಕಳೆದ ಅಕ್ಟೋಬರ್ 17ರ ತುಲಾ ಸಂಕ್ರಮಣದಿಂದ ನವೆಂಬರ್ 16ರ ಕಿರುಸಂಕ್ರಮಣದವರೆಗೆ ನಿರಂತರವಾಗಿ ನಡೆದ 32 ನೇ ವರ್ಷದ,ಒಂದು ತಿಂಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಎರಡು ಹೊತ್ತಿನ ಅನ್ನದಾನ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಈ ಒಂದು ತಿಂಗಳ ಅವಧಿಯಲ್ಲಿ ಸುಮಾರು 2 ಲಕ್ಷ ಭಕ್ತಾದಿಗಳಿಗೆ ಅನ್ನದಾನ ಮಾಡುವ ಅಂದಾಜಿನೊಂದಿಗೆ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಕೊಡಗಿನ ವಿವಿಧ ಭಾಗಗಳಿಂದ ಹಾಗೂ ಹೊರ ಜಿಲ್ಲೆ ಮತ್ತು ಇತರ ಪ್ರದೇಶಗಳಿಂದ ಬಂದ ದಾನಿಗಳ ಉದಾರ ಸಹಕಾರದಿಂದ ಈ ಮಹತ್ಕಾರ್ಯ ನೆರವೇರಿದೆ.
ಕೊಡಗು ಏಕೀಕರಣ ರಂಗದ ಈ ಅನ್ನದಾನ ಸೇವೆಯನ್ನು ಯಶಸ್ವಿಯಾಗಿ ನಡೆಸಲು ಹಗಲಿರುಳು ಶ್ರಮಿಸಿದ ಕೊಡಗು ಸ್ವಯಂಸೇವಕರು ಹಾಗೂ ಸಹಕರಿಸಿದ ವಿವಿಧ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಸೇವೆ ಹಾಗೂ ಸಹಕಾರವನ್ನು ಕೃತಜ್ಞತಾಪೂರ್ವಕವಾಗಿ ಕೊಡಗು ಏಕೀಕರಣ ರಂಗ ಸ್ಮರಿಸುತ್ತದೆ.
ಇಂದು ಅನ್ನದಾನದ ಅಂತಿಮ ದಿನದಂದು ಕಾವೇರಮ್ಮನಿಗೆ ವಿಶೇಷ ಕೃತಜ್ಞತಾ ಸಮರ್ಪಣಾ ಪೂಜೆಯನ್ನು ಸಲ್ಲಿಸುವ ಮೂಲಕ ಈ ಸೇವಾ ಕಾರ್ಯಕ್ಕೆ ಮಂಗಳ ಹಾಡಲಾಯಿತು.












