ಇತ್ತೀಚಿನ ಸುದ್ದಿ
ರೇಷನ್ ಕಾರ್ಡ್ ಇ-ಕೆವೈಸಿಗೆ ಹಣ ಕೇಳಿದರೆ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು: ಸಚಿವ ರಿಜ್ವಾನ್ ಅರ್ಷದ್ ಖಡಕ್ ಎಚ್ಚರಿಕೆ
17/11/2026, 13:27
ಬೆಂಗಳೂರು(reporterkarnataka.com): ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು, ರೇಷನ್ ಕಾರ್ಡ್ ಇ-ಕೆವೈಸಿ (e-KYC) ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಕಠಿಣ ಎಚ್ಚರಿಕೆ ನೀಡಿದ್ದು, ಇ-ಕೆವೈಸಿಗಾಗಿ ಹಣ ಕೇಳುವ ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಪಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಚಿವರು ಅನ್ನ ಸೇವಾ ಆಪ್ ಕುರಿತು ಮಾತನಾಡಿ, ಲಕ್ಷಾಂತರ ಜನರು ಈ ಆಪ್ ಮೂಲಕ ಸುಲಭವಾಗಿ ಇ-ಕೆವೈಸಿ ಮಾಡಿಕೊಂಡಿದ್ದಾರೆ. ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ ಆಪ್‌ನ ಜಿಯೋ-ಫೆನ್ಸಿಂಗ್ ಸೌಲಭ್ಯವನ್ನು ಇಡೀ ದೇಶಕ್ಕೆ ವಿಸ್ತರಿಸಲಾಗಿದೆ. ಆರಂಭದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿದ್ದರೂ, ಅವುಗಳನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು.
ಆದರೆ, ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿಗಾಗಿ ಹಣ ಕೇಳುತ್ತಿರುವ ಆರೋಪಗಳು ಕೇಳಿಬಂದಿದ್ದು, ಇಂತಹ ಪ್ರಕರಣಗಳು ದಾಖಲಾದ ಕೂಡಲೇ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಮೊಬೈಲ್‌ಗಳಲ್ಲಿ ದಾಖಲಿಸಿದ ವೀಡಿಯೋಗಳ ಆಧಾರದ ಮೇಲೆ, ಸುಮಾರು 10-12 ಅಂಗಡಿಗಳನ್ನು ಈಗಾಗಲೇ ಅಮಾನತುಪಡಿಸಲಾಗಿದೆ. ಕೆಲವು ಆಹಾರ ನಿರೀಕ್ಷಕರ ಮೇಲೂ ನೋಟಿಸ್ ಜಾರಿ ಮಾಡಿ, ಅಮಾನತು ಗೊಳಿಸಲಾಗಿದೆ. 99% ಅಂಗಡಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ, 1% ಅಂಗಡಿಗಳ ತಪ್ಪಿಗೆ ಎಲ್ಲರೂ ಕೆಟ್ಟ ಹೆಸರು ಪಡೆಯಬಾರದು ಎಂದು ಸಚಿವರು ಕಳವಳ ವ್ಯಕ್ತಪಡಿಸಿ, ಅಕ್ರಮಗಳನ್ನು ಸಹಿಸುವುದಿಲ್ಲ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.












