4:39 PM Tuesday17 - November 2026
ಬ್ರೇಕಿಂಗ್ ನ್ಯೂಸ್
ತಲಕಾವೇರಿ ಅನ್ನದಾನ ಮಹಾಯಜ್ಞ ಸಂಪನ್ನ: ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ… ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ… ಉತ್ತರಾಖಂಡ | ಸುಮಾರು 100 ಮೀಟರ್‌ ಆಳದ ಕಂದಕಕ್ಕೆ ಉರುಳಿದ ಬಸ್: 8… ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಹೈಕಮಾಂಡ್ ತೀರ್ಮಾನಿಸಲಿದೆ: ಸಿಎಂ ಡಿ. ಕೆ. ಶಿವಕುಮಾರ್ ತಿಪಟೂರು | ಕೆಎಸ್​ಆರ್​ಟಿಸಿ ಬಸ್ ರೂಪದಲ್ಲಿ ಬಂದ ಮೃತ್ಯು: ಭೀಕರ ಅಪಘಾತದಲ್ಲಿ ಯುವಕರಿಬ್ಬರು… ಮಂಡ್ಯ | ನಂದಿನಿ ಮೊಸರಿನ ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂದು ಸುಳ್ಳು… ತುಮಕೂರು | ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ವೇದಿಕೆ ಮೇಲೆಯೇ ಭಾವುಕರಾದ ಡಾ. ಪರಮೇಶ್ವರ್ ಪಂಡಿತ್ ಜವಾಹರಲಾಲ್ ನೆಹರು 137ನೇ ಜನ್ಮದಿನ: ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್… ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: ಈಗ ಸೆಂಚುರಿ ಬಾರಿಸಿದೆ… ಚಿಕ್ಕಮಗಳೂರು | ತರೀಕೆರೆ‌ ಬಳಿ ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ: ಪುತ್ರಿ ಸಾವು; ತಂದೆ…

ಇತ್ತೀಚಿನ ಸುದ್ದಿ

ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ

17/11/2026, 16:30

*ತಂಬಾಕು ಮುಕ್ತ ಯುವ ಅಭಿಯಾನ 4.0ಕ್ಕೆ ಚಾಲನೆ – ಸೆಲೆಬ್ರಿಟಿಗಳ ಸಿಗರೇಟ್ ಪೋಸ್‌ಗೆ ಸಚಿವರ ಅಸಮಾಧಾನ*

ಬೆಂಗಳೂರು(reporterkarnataka.com): ಸಿನಿಮಾ ನಟರು ಹಾಗೂ ಸೆಲೆಬ್ರಿಟಿಗಳು ಸಿಗರೇಟ್ ಹಿಡಿದುಕೊಂಡು ಪೋಸ್ ನೀಡುವುದನ್ನು ನೋಡಿ ಯುವಜನತೆ ಪ್ರೇರಣೆ ಪಡೆಯಬಾರದು. ಅವರನ್ನೇ ಅನುಕರಿಸಿ ಸಿಗರೇಟ್ ಸೇವನೆ ಆರಂಭಿಸಿದರೆ ಮುಂದೆ ಆರೋಗ್ಯ ಸಮಸ್ಯೆ ಎದುರಿಸಿ ಐಸಿಯು ಸೇರುವ ಪರಿಸ್ಥಿತಿ ಬರಬಹುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಸಿದರು.
ನಗರದ ಆರೋಗ್ಯ ಸೌಧದಲ್ಲಿ ನಡೆದ ತಂಬಾಕು ಮುಕ್ತ ಯುವ ಅಭಿಯಾನ 4.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಜನತೆ ತಂಬಾಕು, ಸಿಗರೇಟ್ ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳಿಂದ ದೂರವಿರಬೇಕು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸಿನಿಮಾಗಳಲ್ಲಿ ಸಿಗರೇಟ್ ಹಿಡಿದು ಪೋಸ್ ನೀಡುತ್ತಾರೆ. ಆದರೆ, ಅವರನ್ನು ನೋಡಿ ಯುವಕರು ಸಿಗರೇಟ್ ಸೇದಲು ಆರಂಭಿಸಿದರೆ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಾಗ ಯಾವ ಸೆಲೆಬ್ರಿಟಿಯೂ ನೆರವಿಗೆ ಬರುವುದಿಲ್ಲ. ಇದರಿಂದ ಯುವಕರ ಕುಟುಂಬವೇ ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು.
ಸಿನಿಮಾ ನಟರ ವಿರುದ್ಧ ವೈಯಕ್ತಿಕವಾಗಿ ನಾನು ಮಾತನಾಡುತ್ತಿಲ್ಲ. ಚಿತ್ರಗಳಲ್ಲಿ ವಿವಿಧ ಸನ್ನಿವೇಶಗಳ ಭಾಗವಾಗಿ ತಂಬಾಕು ಸೇವನೆಯ ದೃಶ್ಯಗಳು ಇರಬಹುದು. ಆದರೆ, ಅವುಗಳನ್ನು ನೋಡಿ ಯುವಜನತೆ ಪ್ರೇರಣೆ ಪಡೆಯಬಾರದು. ಉತ್ತಮ ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಬಡವರಾಗಿ ಹುಟ್ಟಬಹುದು, ಆದರೆ ಬಡವರಾಗಿ ಸಾಯಬಾರದು. ದುಶ್ಚಟಗಳಿಂದ ಉತ್ತಮ ವ್ಯಕ್ತಿತ್ವ ನಾಶವಾಗಲು ಅವಕಾಶ ನೀಡಬಾರದು ಎಂದು ಕಿವಿಮಾತು ಹೇಳಿದರು.
2013ರಲ್ಲಿ ಡಾ. ವಿಶಾಲ್ ರಾವ್ ಅವರು ತಂಬಾಕು ನಿಷೇಧದ ಅಗತ್ಯದ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ತಂಬಾಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ತಂಬಾಕು ಕಂಪನಿಗಳಿಂದ ಸರ್ಕಾರ ಸಿಎಸ್‌ಆರ್‌ ನಿಧಿ ಸ್ವೀಕರಿಸಬಾರದು ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ತಂಬಾಕು ಕಂಪನಿಗಳಿಂದ ಯಾವುದೇ ನಿಧಿ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಎಂಟಿಸಿ ಬಸ್‌ಗಳಲ್ಲಿ ಗುಟ್ಕಾ ಹಾಗೂ ತಂಬಾಕು ವಿರೋಧಿ ಜಾಗೃತಿ ಪ್ರದರ್ಶನ, ಐಟಿ-ಬಿಟಿ ಕಂಪನಿಗಳಲ್ಲಿ ಸ್ಮೋಕಿಂಗ್ ಝೋನ್ ನಿಯಂತ್ರಣದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಲಕ್ಷಾಂತರ ಜನರು ಕೆಲಸ ಮಾಡುವ ಸ್ಥಳಗಳಲ್ಲಿ ಸಂಪೂರ್ಣ ನಿಯಂತ್ರಣ ಕಷ್ಟವಾದರೂ ಜಾಗೃತಿ ಹಾಗೂ ನಿಯಮಗಳ ಮೂಲಕ ಕಡಿವಾಣ ಹಾಕಬೇಕಿದೆ. ಸ್ಮೋಕಿಂಗ್ ಝೋನ್ ನಿಯಂತ್ರಣದ ಸಲಹೆಗಳನ್ನು ಪರಿಶೀಲಿಸಲಾಗುವುದು ಎಂದರು.
ಇ-ಸಿಗರೇಟ್ ನಿಷೇಧದ ನಡುವೆಯೂ ಅಕ್ರಮ ಮಾರಾಟ ನಡೆಯುತ್ತಿರುವ ಕುರಿತು ಮಾತನಾಡಿ, ನಿಷೇಧ ಘೋಷಿಸಿದ ತಕ್ಷಣವೇ ಶೇ.100ರಷ್ಟು ಮಾರಾಟ ಶೂನ್ಯವಾಗುತ್ತದೆ ಎನ್ನಲು ಸಾಧ್ಯವಿಲ್ಲ. ಕದ್ದುಮುಚ್ಚಿ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಯುವಜನತೆ ಯಾವುದೇ ಸೆಲೆಬ್ರಿಟಿಗಳ ಪ್ರಭಾವಕ್ಕೆ ಒಳಗಾಗದೆ ತಂಬಾಕು ಸೇವನೆಯಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು