ಇತ್ತೀಚಿನ ಸುದ್ದಿ
ವಿದೇಶಕ್ಕೆ ಹಾರಲು ಯತ್ನಿಸುತ್ತಿದ್ದ ಬಸವ ಮಂಟಪ ಲೇಖಕನಿಗೆ ಶಾಕ್: ಕೊಚ್ಚಿ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
21/11/2026, 19:27
ಕೊಚ್ಚಿ(repprterkarnataka.com): 12ನೇ ಶತಮಾನದ ಮಹಾನ್ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ಬಸವ ಮಂಟಪ ಕೃತಿಯಲ್ಲಿ ವಚನ ಸಾಹಿತ್ಯಕ್ಕೆ ಅಪಮಾನ ಮಾಡಿದ ಆರೋಪ ಎದುರಿಸುತ್ತಿರುವ ಅನಿವಾಸಿ ಕನ್ನಡಿಗ ಲೇಖಕ ರವಿ ಹಂಜ್ ಅವರಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಪೊಲೀಸರು ಜಾರಿಗೊಳಿಸಿದ್ದ ಲುಕ್‌ಔಟ್ ನೋಟಿಸ್ ಆಧಾರದ ಮೇಲೆ ಕೇರಳದ ಕೊಚ್ಚಿಯ ನೆಡುಂಬಸ್ಸೇರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಮತ್ತು ಭದ್ರತಾ ಅಧಿಕಾರಿಗಳು ರವಿ ಹಂಜ್ ಅವರನ್ನ ವಶಕ್ಕೆ ಪಡೆದಿದ್ದಾರೆ.
ಈ ರವಿ ಹಂಜ್ ಬಂಧನದ ಬೆನ್ನಲ್ಲೇ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಅವರನ್ನ ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗುತ್ತಿದೆ.
*ದುಬೈಗೆ ತೆರಳುವ ವೇಳೆ ಲುಕ್‌ಔಟ್ ನೋಟಿಸ್ ಅನ್ವಯ ಕ್ರಮ*
ಅಮೆರಿಕದ ನಾಗರಿಕತ್ವ ಹೊಂದಿರುವ ಲೇಖಕ ರವಿ ಹಂಜ್ ಅವರು ದುಬೈಗೆ ವಿಮಾನ ಏರಲು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ವಲಸೆ ತಪಾಸಣೆಯ ವೇಳೆ, ಬೆಳಗಾವಿ ಹಾಗೂ ಬೆಂಗಳೂರು ಪೊಲೀಸರು ಹೊರಡಿಸಿದ್ದ ಲುಕ್‌ಔಟ್ ನೋಟಿಸ್ ಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತಾ ಅಧಿಕಾರಿಗಳು ತಕ್ಷಣವೇ ರವಿ ಅವರನ್ನ ತಡೆದಿದ್ದಾರೆ.
ಈ ಕುರಿತು ಬೆಳಗಾವಿ ಪೊಲೀಸರಿಗೆ ಅಧಿಕೃತ ಮಾಹಿತಿ ರವಾನಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ವಿಚಾರಣೆಗಾಗಿ ಬೆಳಗಾವಿ ಪೊಲೀಸರ ತಂಡ ಸಂಜೆ 5 ಗಂಟೆಯ ವೇಳೆಗೆ ಕೊಚ್ಚಿಗೆ ತಲುಪಿ ಅವರನ್ನ ವಶಕ್ಕೆ ಪಡೆಯಲಿದೆ.












