ಇತ್ತೀಚಿನ ಸುದ್ದಿ
Mangaluru | ಸಂತ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ: 9 ದಿನಗಳ ನೋವೇನಾ ಪ್ರಾರ್ಥನೆಗೆ ಚಾಲನೆ
14/09/2026, 21:10
ಮಂಗಳೂರು(reporterkarnataka.com): ನಗರದ ಜೈಲ್ ರಸ್ತೆಯ ಕಪುಚಿನ್ ಧರ್ಮಗುರುಗಳ ಸೈಂಟ್ ಆನ್ಸ್ ಫ್ರೈರಿ ಆವರಣದಲ್ಲಿ ಇರುವ ಸೈಂಟ್ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದ ಅಂಗವಾಗಿ 9 ದಿನಗಳ ನೋವೇನಾವನ್ನು ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯದ ಪ್ರಧಾನ ಗುರು ಹಾಗೂ ಪಾಲ್ದನೆ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಧ್ವಜಾರೋಹಣ ಮಾಡುವ ಮೂಲಕ ಸೋಮವಾರ ಉದ್ಘಾಟಿಸಿದರು.
ಬಳಿಕ ನಡೆದ ಬಲಿ ಪೂಜೆಯ ನೇತೃತ್ವ ವಹಿಸಿದ್ದ ಅವರು ಪವಿತ್ರ ಶಿಲುಬೆಯ ಮಹತ್ವದ ಬಗ್ಗೆ ಪ್ರವಚನ ನೀಡಿ ಪಾದ್ರೆ ಪಿಯೊ ಅವರ ಜೀವನದರ್ಶಗಳ ಕುರಿತಂತೆ ವಿವರಿಸಿದರು. ಪಾದ್ರೆ ಪಿಯೊ ಅವರು ದೇವರ ಸೇವಕರಾಗಿ, ಯೇಸು ಕ್ರಿಸ್ತರ ಪರಮ ಭಕ್ತರಾಗಿ ಶಿಲುಬೆಯ ಆರಾಧಕರಾಗಿದ್ದರು ಹಾಗೂ ಅವರ ಕೈಯಲ್ಲಿ ಶಿಲುಬೆಗೇರಿದ ಯೇಸು ಕ್ರಿಸ್ತರ ಐದು ಗಾಯಗಳು ಗೋಚರಿಸಿದ ಪವಾಡದ ಬಗ್ಗೆ ವಿವರಿಸಿದರು.
ಬಲಿ ಪೂಜೆಯಲ್ಲಿ ಕಪುಚಿನ್ ಧರ್ಮಗುರುಗಳ ಸಂಸ್ಥೆಯ ಕರ್ನಾಟಕ ವಿಭಾಗದ ಪ್ರೊವಿನ್ಸಿಯಲ್ ವಂದನೀಯ ಫಾ. ರೊಬಿನ್ ವಿಕ್ಟರ್ ಡಿ ಸೋಜಾ, ಸೈಂಟ್ ಆನ್ಸ್ ಫ್ರೈರಿಯ ಸುಪೀರಿಯರ್ ವಂದನೀಯ ಫಾ. ಜೆರಾಲ್ಡ್ ಲೋಬೊ, ನಿರ್ದೇಶಕರಾದ ವಂದನೀಯ ಫಾ. ನೋಯೆಲ್ ಅಲ್ಮೆಡಾ ಹಾಗೂ ಮಠದ ಇತರ ಗುರುಗಳು ಮತ್ತು ಪಾಲ್ದನೆ ಸಂತ ತೆರೆಸಾ ಚರ್ಚ್ ನ ಸಹಾಯಕ ಧರ್ಮ ಗುರು ವಂದನೀಯ ಫಾ. ಜೋಸೆಫ್ ಕುವೆಲ್ಲೊ ಅವರು ಉಪಸ್ಥಿತರಿದ್ದರು.
ಬಲಿ ಪೂಜೆಯಲ್ಲಿ ಸೆಲ್ಮಾ ಡಿ ಪೌಲ್ ಮತ್ತು ತಂಡದವರು ಮಧುರ ಗಾಯನಗಳನ್ನು ಪ್ರಸ್ತುತ ಪಡಿಸಿ ಭಕ್ತಿಯನ್ನು ಉದ್ದೀಪಿಸಲು ಸಹಕರಿಸಿದರು.
ಸಪ್ಟೆಂಬರ್ 23 ರಂದು ಸೈಂಟ್ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ನಡೆಯಲಿದೆ. ದೇವರ ಮಕ್ಕಳಾಗಿರುವ ನಾವು ಅವರ ರಾಜ್ಯವನ್ನು ಅರಸುತ್ತಾ ಪಾದ್ರೆ ಪಿಯೊ ಅವರ ಜೀವನದ ಆದರ್ಶವನ್ನು ಅನುಸರಿಸೋಣ ಎನ್ನುವುದು ಈ ವರ್ಷದ ಹಬ್ಬದ ವಿಷಯ ಹಾಗೂ ಸಂದೇಶವಾಗಿದೆ.












