ಇತ್ತೀಚಿನ ಸುದ್ದಿ
Caucal or craw Pheasart | ಗಾಂಭೀರ್ಯದ ನಡಿಗೆಯ ಕೆಂಬೂತ, ಕುಪ್ಪಳಕ್ಕಿ, ಬಾರದ್ವಾಜ: ಕೀಟ, ಹಲ್ಲಿ ಹಾವೇ ಇದರ ಆಹಾರ
12/09/2026, 00:30
ನಮ್ಮ ಸುತ್ತ ಮುತ್ತಲೂ ಪ್ರಾತಃ ಕಾಲದಲ್ಲಿ ಕಾಣಸಿಗುವ ದೊಡ್ಡ ಕಾಗೆಯಂತಿರುವ ಹಕ್ಕಿಯೇ ಕೆಂಬೂತ. ಇವುಗಳ ಉದ್ದವಾದ ಬಾಲ, ತಾಮ್ರದ ಬಣ್ಣದ ರೆಕ್ಕೆ ಗಾಂಭೀರ್ಯದ ನಡಿಗೆಯೇ ಆಕರ್ಷಣೆ. ದೇಹದ ಬಣ್ಣ ಕಡು ಕಪ್ಪು,ಎದೆ ಹೊಟ್ಟೆ ಭಾಗ ನೀಲಿ ಕಪ್ಪು ಮಿಶ್ರಿತವಾಗಿ ಹೊಳೆಯುವಂತೆ ಕಾಣುತ್ತದೆ. ಕೆಂಪಾದ ಕಣ್ಣುಗಳ ಸೊಗಸು ಇನ್ನೂ ಚಂದ. ರೆಕ್ಕೆ ನಿರ್ಬಲ ವಾಗಿರುದರಿಂದ ಹೆಚ್ಚಾಗಿ ನೆಲದಲ್ಲಿ ನಡೆದಾಡಿಕೊಂಡಿರುತ್ತದೆ.ಒಂಟಿಯಾಗಿ ಅಥವಾ ಜೋಡಿಯಾಗಿ ಕಂಡು ಬರುವ ಇವುಗಳು ಕೀಟ, ಹಣ್ಣು, ಹಲ್ಲಿ ಹಾಗೂ ಚಿಕ್ಕ ಹಾವುಗಳನ್ನು ಭಕ್ಷಿಸುತ್ತದೆ. ಅಗಲವಾದ ಕೊಕ್ಕು ತುಸು ಭಾಗಿದ್ದು ಆಹಾರವನ್ನು ಭಕ್ಷಿಸಲು ಸಹಕಾರಿ. ಹೆಣ್ಣು ಹಕ್ಕಿಗಳು ಗಂಡು ಹಕ್ಕಿಗಳಿಗಿಂತ ತುಸು ದೊಡ್ಡದು. ಗಂಡು ಹಕ್ಕಿಗಳು ಸಣ್ಣ ಪೊದೆಗಳಲ್ಲಿ ಅಗಲವಾದ ಬಟ್ಟಲಿನಂತಿರುವ ಗೂಡನ್ನು ಕಟ್ಟುತ್ತದೆ. ಹೆಣ್ಣು ಹಕ್ಕಿಗಳು 3 ರಿಂದ 5 ಮೊಟ್ಟೆಗಳನ್ನು ಇಡುತ್ತದೆ. 20ರಿಂದ 21 ದಿನಗಳಲ್ಲಿ ಹೊರಬರುವ ಮರಿಗಳ ಪಾಲನೆಯಲ್ಲಿ ಗಂಡು ಹಕ್ಕಿಗಳು ಪ್ರದಾನ ಪಾತ್ರವಹಿಸುತ್ತದೆ. ಈ ಹಕ್ಕಿಗಳು ಹೆಚ್ಚಾಗಿ ಜೀವನದಲ್ಲಿ ಒಂದೇ ಸಂಗಾತಿಯೊಂದಿಗೆ ಜೀವನ ನಡೆಸುತ್ತದೆ.




ಸಂಕೋಚ ಸ್ವಭಾವದ ಈ ಹಕ್ಕಿಗಳು ಅಪಾಯದ ಸೂಚನೆ ಸಿಕ್ಕಿದಾಗ ಪೊದೆಗಳಲ್ಲಿ ಅಡಗುತ್ತದೆ. ಇವುಗಳು ಕೂಗಿದಾಗ ಶಂಖದಂತಹ ಶಬ್ಧ ಹೊರಡುವುದರಿಂದ ಶುಭದ ಸಂಕೇತ ಎನ್ನುವ ಭಾವನೆ ಇದೆ. ಇವುಗಳನ್ನು ರತ್ನ ಪಕ್ಷಿ ಎಂತಲೂ ಕರೆಯುತ್ತಾರೆ.












