ಇತ್ತೀಚಿನ ಸುದ್ದಿ
ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ ಹೊಟೇಲ್, ವಸತಿಗೃಹ: ಪೂರ್ಣಗೊಳ್ಳದ ಕಾಮಗಾರಿ!
18/10/2026, 15:25
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪ್ರವಾಸಿಗರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಹೋಟೆಲ್ ಮತ್ತು ವಸತಿಗೃಹಗಳು ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದ್ದು, ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.






ತರುವೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಪ್ರವಾಸೋದ್ಯಮ ಇಲಾಖೆಗೆ ಸುಮಾರು ನಾಲ್ಕು ಎಕರೆ ಜಾಗ ನೀಡಲಾಗಿತ್ತು. ಬೆಲೆಬಾಳುವ ಈ ಜಾಗದಲ್ಲಿ ಪ್ರವಾಸಿಗರು ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೋಟೆಲ್, ವಸತಿಗೃಹ ಹಾಗೂ ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿರ್ಮಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕೊರತೆಯಿಂದಾಗಿ ಈ ಕಟ್ಟಡಗಳು ಇಂದು ಪಾಳುಬಿದ್ದ ಸ್ಥಿತಿಗೆ ತಲುಪುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*6 ತಿಂಗಳಿಂದ ಹೋಟೆಲ್ಗೆ ಬೀಗ:*
ಹೋಟೆಲ್ ಕಟ್ಟಡದ ಕಾಮಗಾರಿ ಪೂರ್ಣಗೊಂಡ ಬಳಿಕ ಕಳೆದ ಎರಡು-ಮೂರು ವರ್ಷಗಳ ಕಾಲ ವ್ಯಾಪಾರ ನಡೆಸಲಾಗಿತ್ತು. ಆದರೆ, ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಕಾರಣದಿಂದ ಕಳೆದ ಆರು ತಿಂಗಳಿಂದ ಹೋಟೆಲ್ಗೆ ಬೀಗ ಹಾಕಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು ಪ್ರವಾಸಿಗರ ಅನುಕೂಲಕ್ಕಾಗಿ ನಿರ್ಮಿಸುತ್ತಿರುವ ವಸತಿಗೃಹದ ಕಾಮಗಾರಿಯೂ ಅಪೂರ್ಣವಾಗಿಯೇ ಉಳಿದಿದೆ ಎನ್ನಲಾಗಿದೆ. ಹೋಟೆಲ್ ಬಂದ್ ಆಗಿರುವುದರಿಂದ ಒಳಗಿರುವ ಪೀಠೋಪಕರಣಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಬಳಕೆಯಾಗದೆ ಹಾಳಾಗುತ್ತಿವೆ. ಕಟ್ಟಡಗಳ ಸುತ್ತಮುತ್ತ ಸ್ವಚ್ಛತೆ ಹಾಗೂ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದ್ದು, ಕಬ್ಬಿಣದ ಭಾಗಗಳು ತುಕ್ಕು ಹಿಡಿಯುತ್ತಿವೆ. ಹೀಗಾಗಿ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಆಸ್ತಿಗಳು ಕಣ್ಣೆದುರೇ ಹಾಳಾಗುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ
*ಅನೈತಿಕ ಚಟುವಟಿಕೆಗಳ ತಾಣವಾಗುತ್ತಿವೆಯೇ?*
ಪ್ರವಾಸಿಗರ ಅನುಕೂಲಕ್ಕಾಗಿ ನಿರ್ಮಿಸಲಾದ ಹೋಟೆಲ್, ವಸತಿಗೃಹ ಹಾಗೂ ಶೌಚಾಲಯದ ಕಟ್ಟಡಗಳು ನಿರ್ವಹಣೆಯಿಲ್ಲದೆ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಕಟ್ಟಡಗಳ ಸುತ್ತಮುತ್ತ ಸೂಕ್ತ ನಿಗಾ ಹಾಗೂ ಭದ್ರತೆ ಇಲ್ಲದಿರುವುದು ಇಂತಹ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುತ್ತಿದೆಯೇ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ನಿರ್ಮಿಸಲಾದ ಕಟ್ಟಡಗಳು ಸಾರ್ವಜನಿಕರ ಬಳಕೆಗೆ ಸಿಗದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಪರ್ಯಾಸ. ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕಾದ ಕಟ್ಟಡಗಳೇ ಇಂದು ನಿರುಪಯುಕ್ತವಾಗಿರುವುದು ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ.
*ನೆರೆ ಪ್ರವಾಹದ ಸಂದರ್ಭದ ನಿರ್ಧಾರವೂ ಚರ್ಚೆಗೆ*
2019ರಲ್ಲಿ ಸಂಭವಿಸಿದ ಮಲೆಮನೆ ನೆರೆಪ್ರವಾಹದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಜಾಗದ ಕೊರತೆಯ ಕಾರಣ ನೀಡಿ ನೆರೆಸಂತ್ರಸ್ತರಿಗೆ ಜಾಗ ನೀಡಿರಲಿಲ್ಲ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಪ್ರವಾಸೋದ್ಯಮ ಇಲಾಖೆಗೆ ಸುಮಾರು ನಾಲ್ಕು ಎಕರೆ ಜಾಗ ನೀಡಿದ್ದರೂ, ಅಲ್ಲಿ ನಿರ್ಮಿಸಲಾದ ಕಟ್ಟಡಗಳು ಸಮರ್ಪಕವಾಗಿ ಬಳಕೆಯಾಗದೆ ಉಳಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಲೆಬಾಳುವ ಭೂಮಿ ಹಾಗೂ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಕಟ್ಟಡಗಳು ಸದುಪಯೋಗವಾಗದಿದ್ದರೆ ಇಂತಹ ಯೋಜನೆಗಳ ಪ್ರಯೋಜನವೇನು ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ.
*ಕಟ್ಟಡಗಳ ಪುನರುಜ್ಜೀವನಕ್ಕೆ ಆಗ್ರಹ*
ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡಗಳ ಸ್ಥಿತಿಗತಿ ಪರಿಶೀಲಿಸಬೇಕು. ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಅಗತ್ಯ ದುರಸ್ತಿ ಕೈಗೊಂಡು ಹೋಟೆಲ್ ಮತ್ತು ವಸತಿಗೃಹಗಳನ್ನು ಪುನಃ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಲ್ಲದೆ, ಕಟ್ಟಡಗಳ ಭದ್ರತೆ, ಸ್ವಚ್ಛತೆ ಹಾಗೂ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಬಗ್ಗೆ ಪರಿಶೀಲನೆ ನಡೆಸಿ, ಸಾರ್ವಜನಿಕ ಆಸ್ತಿಗಳು ಹಾಳಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ನಿರ್ಮಿಸಲಾದ ಸೌಲಭ್ಯಗಳು ಜನರಿಗೆ ಪ್ರಯೋಜನವಾಗುವಂತೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.












