ಇತ್ತೀಚಿನ ಸುದ್ದಿ
ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ: ಪಿಚ್ಚರ್ ಅಭಿ ಬಾಕಿ ಹೈ ಎಂದ ಬಿಜೆಪಿ
05/06/2026, 19:00
ಬೆಂಗಳೂರು(reporterkarnataka.com): ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಿತರಾಗಿ ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ಸಲ್ಲಿಸಿರುವ ವಿಚಾರ ಬಿಜೆಪಿಗೆ ಟೀಕೆಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.
ರಾಜೀನಾಮೆ ಘೋಷಣೆ ಬೆನ್ನಲ್ಲೇ ಎಕ್ಸ್ ಪೋಸ್ಟ್ ಮಾಡಿರುವ ಬಿಜೆಪಿ ”ಪಿಚ್ಚರ್ ಅಭಿ ಬಾಕಿ ಹೈ..! ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಎರಡನೇ ದಿನವೇ ಸಂಪುಟ ರಚನೆಯ ರೂಪದಲ್ಲಿ ಬಿದ್ದಿದೆ.!

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಸಂಪುಟ ರಚನೆಯಾಗಿ ಎರಡನೇ ದಿನಕ್ಕೆ ಪತನವಾಗಿದೆ.!, ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ರಾಮಲಿಂಗಾ ರೆಡ್ಡಿ ಅವರು ಇಂಟರ್ವೆಲ್ ಸಿಎಂ ಡಿ.ಕೆ.ಶಿವಕುಮಾರ್ ಅವರ ಅವಧಿಯಲ್ಲೂ ಕಿತ್ತಾಟ ಮುಂದುವರಿಯಲಿದೆ ಎಂಬ ದೊಡ್ಡ ಸಂದೇಶ ರವಾನಿಸಿದಂತಿದೆ. ಆಂತರಿಕ ಕಚ್ಚಾಟಗಳಲ್ಲೇ ಮುಳುಗುವ ಮುನ್ಸೂಚನೆ ಈಗಲೇ ಸಿಕ್ಕಿರುವಾಗ ಇನ್ನು ರಾಜ್ಯದ ಹಳಿತಪ್ಪಿರುವ ಆಡಳಿತ ಸರಿದಾರಿಗೆ ಹೋಗಬಹುದು ಎನ್ನುವುದನ್ನು ಈ ನಾಡಿನ ಜನ ನಿರೀಕ್ಷಿಲು ಸಾಧ್ಯವೇ?”ಈ ಪೆಟ್ಟು ಯಾರ ಒಳ ಏಟು” ಎಂದು ತಿಳಿದುಕೊಳ್ಳುವುದರಲ್ಲೇ ಬಂಡೆ ಜೆಲ್ಲಿಪುಡಿಯಾಗುವ ಎಲ್ಲಾ ಮುನ್ಸೂಚನೆ ಸಿಕ್ಕಂತಿದೆ!” ಎಂದು ಟೀಕಾಸ್ತ್ರ ಪ್ರಯೋಗಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಕ್ಸ್ ಪೋಸ್ಟ್ ಮಾಡಿದ್ದು, ”ಅಧಿಕಾರ ದಾಹವೇ ಕಾಂಗ್ರೆಸ್ ನ ಪರಮೋಚ್ಛ ಉದ್ದೇಶ, ಜನರ ಕಲ್ಯಾಣವಲ್ಲ!
ಮೊದಲು ಸಿಎಂ ಖುರ್ಚಿಗಾಗಿ ಕಿತ್ತಾಡುತ್ತಿದ್ದರು, ಈಗ ಸಚಿವ ಸ್ಥಾನಕ್ಕಾಗಿ, ಖಾತೆಗಾಗಿ ಕಿತ್ತಾಡುತ್ತಿದ್ದಾರೆ!. ಭ್ರಷ್ಟಾಚಾರ ಅಧಿಕಾರ ಲಾಲಸೆ ಹಾಗೂ ಲಾಭದಾಯಕ ಹುದ್ದೆಗಳಿಗಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅತಿ ಶೀಘ್ರದಲ್ಲಿ ಪತನಗೊಳ್ಳಲಿದೆ ಎಂಬ ಬಿಜೆಪಿ ನಿರೀಕ್ಷೆ ನಿಜವಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದು ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವುದು ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ!. ಮುಂಗಾರು ಹಂಗಾಮು ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಬೀಜ ರಸಗೊಬ್ಬರ ಮುಂತಾದ ನೆರವು ನೀಡ ಬೇಕಾದ ರಾಜ್ಯ ಸರ್ಕಾರ ಹೀಗೆ ಅಧಿಕಾರದ ಕಿತ್ತಾಟದಲ್ಲಿ ತೊಡಗಿರುವುದು ಕರ್ನಾಟಕದ ದುರಂತವೇ ಸರಿ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸರ್ಕಾರದ ಆಂತರಿಕ ಕಚ್ಚಾಟವನ್ನು ಬದಿಗೊತ್ತಿ ರಾಜ್ಯದ ರೈತರ, ಕೃಷಿ ಕಾರ್ಮಿಕರ, ಬಡವರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಒಂದು ಕ್ಷಣವು ಅಧಿಕಾರದಲ್ಲಿ ಉಳಿಯದೆ ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನಾದೇಶ ಪಡೆಯಬೇಕು” ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.












