ಇತ್ತೀಚಿನ ಸುದ್ದಿ
ಕಾವುಬೈಲ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಪೂರ್ವಭಾವಿ ಸಭೆ
23/11/2026, 10:42
ಮಂಗಳೂರು(reporterkarnataka.com): ಸುಮಾರು 800 ವರುಷ ಅಧಿಕ ಇತಿಹಾಸ ಹೊಂದಿರುವ ಬಜಾಲ್ ಕಾವುಬೈಲ್ನ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಪೂರ್ವಭಾವಿ ಸಭೆಯು ಕ್ಷೇತ್ರದ ತಂತ್ರಿವರ್ಯರಾದ ಶ್ರೀ ನೀಲೇಶ್ವರ ಪದ್ಮನಾಭ ರವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ರಾಜಾಂಗಣದಲ್ಲಿ ನಡೆಯಿತು.
ಕ್ಷೇತ್ರದ ತಂತ್ರಿವರ್ಯರಾದ ಶ್ರೀ ನೀಲೇಶ್ವರ ಪದ್ಮನಾಭ ಯವರು ಪ್ರಾಸ್ತಾವಿಕವಾಗಿ ಮಾತನಾಡಿ “ಬ್ರಹ್ಮಕಲಶೋತ್ಸವಕ್ಕೆ ಪ್ರೇರಕವಾದ ಅಂಶಗಳು ಪೂರಕವಾದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಭಕ್ತರಿಂದ ಕರಸೇವೆ, ಹಾಗೂ ಬ್ರಹ್ಮಕಲಶೋತ್ಸವದ ಆಶಯದ ಬಗೆಗೆ ಸವಿವರವಾಗಿ ತಿಳಿಸುತ್ತಾ ಬರುವ ದಿನಗಳಲ್ಲಿ ಜರುಗುವ ಎಲ್ಲಾ ದೇವತಾಕಾರ್ಯ, ಸತ್ಕಾರ್ಯಗಳಲ್ಲಿ ಭಕ್ತರು ಸಂಪೂರ್ಣವಾಗಿ ಪಾಲ್ಗೊಂಡು ಬ್ರಹ್ಮಕಲಶೋತ್ಸವವನ್ನು ಸರಳ ಹಾಗೂ ಮಾದರಿ ಬ್ರಹ್ಮಕಲಶೋತ್ಸವನ್ನಾಗಿಸಿ ಯಶಸ್ವಿಗೊಳಿಸಬೇಕಾಗಿ” ಕೋರಿದರು. ಹಾಗೂ ಭಕ್ತರಿಗೆ ಕ್ಷೇತ್ರದಲ್ಲಿ ಆಗತಕ್ಕಂತಹ ಕೈಕಂರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ತಾವು ನೀಡುವುದಾಗಿ ತಿಳಿಸಿದರು.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಾಮಚಂದ್ರ ಆಳ್ವ ಅವರು “ಸರ್ವರ ಉಪಸ್ಥಿತಿಗೆ ಸಂತಸವನ್ನು ವ್ಯಕ್ತಪಡಿಸಿ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾ ಶ್ರೀ ಕ್ಷೇತ್ರದ ಕಳೆದ ವಾರ್ಷಿಕ ಜಾತ್ರೋತ್ಸವದ ರಕ್ತೇಶ್ವರಿ ನೇಮೊತ್ಸವದ ಸಂದರ್ಭದಲ್ಲಿ ರಕ್ತೇಶ್ವರಿ ದೇವಿಗೆ ಸಮರ್ಪಣೆಗೊಂಡ ಒಂದು ಹರಿವಾಣ ಕಾಣಿಕೆ ಮೊತ್ತವನ್ನು ಪ್ರಥಮ ಕಾಣಿಕೆಯಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಿಗೆ ಹಸ್ತಾತರಿಸಿದರು.
ಬ್ರಹ್ಮಕಲಶೋತ್ಸವದ ಪ್ರಧಾನ ಸಂಚಾಲಕರಾದ ಅಂಬಾ ಮಹೇಶ್ವರಿ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಎ. ಸೀತಾರಾಮ್ ಜಪ್ಪು ಅರಕೆರೆಬೈಲ್ ರವರು ಮಾತನಾಡುತ್ತಾ “ದೇವಸ್ಥಾನದಲ್ಲಿ ಭರದಿಂದ ಆಗಬೇಕಾದ ಕೆಲಸ ಕಾರ್ಯಗಳು ಮತ್ತು ಅದರಲ್ಲಿ ಬಹುವಾಗಿ ತೊಡಗಿಸಿಕೊಳ್ಳಬೇಕಾದ ಅವಶ್ಯಕತೆಯ ಬಗೆಗೆ ವಿವರಿಸುತ್ತಾ, ವಿಸ್ತöÈತ ಮಾಹಿತಿ” ನೀಡಿದರು.
ಮಾಜಿ ಕಾರ್ಪೊರೇಟರ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಪ್ರವೀಣ್ ಚಂದ್ರ ಆಳ್ವ ಅವರು ಮಾತನಾಡಿ “ಕ್ಷೇತ್ರದ ಅಭಿವೃದ್ಧಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಸಂಪೂರ್ಣ ಸಹಕಾರ ನೀಡಲಿದ್ದು ಪಾಲಿಕೆಯಿಂದ ಆಗಬೇಕಾದ ಕಾರ್ಯಗಳ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಮತ್ತು ಕಾಮಗಾರಿಯ ಬಗ್ಗೆ ಈಗಾಗಲೇ ಪಾಲಿಕೆಯ ಗಮನವನ್ನು ಸೆಳೆಯಲಾಗಿದ್ದು ಇದರ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಬ್ರಹ್ಮ ಕಲಶೋತ್ಸವದ ಯಶಸ್ವಿಗೆ ಎಲ್ಲರ ಸಹಕಾರ ಕೋರಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಭಾಸ್ಕರ್ ಚಂದ್ರ ಶೆಟ್ಟಿ ಅವರು ಮಾತನಾಡಿ ಕ್ಷೇತ್ರವು ಬಹು ಇತಿಹಾಸವನ್ನು ಹೊಂದಿದ್ದು, ಹೀಗಾಗಿ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಅದ್ದೂರಿಯಾಗಿ ನಡೆಯಲು ಸಹಕಾರ ಕೋರಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿಯಾದ ಹಾಗೂ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಕಿರಣ್ ರೈ ಬಜಾಲ್ ರವರು ಕೆಲಸ ಕಾರ್ಯಗಳು ಉತ್ತಮವಾಗಿ ಮತ್ತು ವೇಗವಾಗಿ ಸಾಗುವಂತೆ ಸರ್ವರ ಸಹಕಾರವನ್ನು ಕೋರಿದರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ವೇದವ್ಯಾಸ್ ಕಾಮತ್ ರವರು ಮಾತನಾಡಿ “ತನ್ನ ಶಾಸಕ ಅವಧಿಯಲ್ಲಿ ನೀಡಿರುವಂತಹ ಕೊಡುಗೆಯಾದ ರಾಜಾಂಗಣದ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಮುಂದಕ್ಕೆ ನಡೆಯುವಂತಹ ಅನ್ನ ಛತ್ರದ ಯೋಜಿತ ಕೆಲಸವನ್ನು ಶೀಘ್ರದಲ್ಲಿ ಮಾಡಲಾಗುವುದು. ಶ್ರೀಕ್ಷೇತ್ರಕ್ಕೆ ಇನ್ನೂ ಅಗತ್ಯವಿದ್ದಲ್ಲಿ ಜಾಗ ಖರೀದಿಗೆ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಪ್ರಾರಂಭದಲ್ಲಿ ಅಭಿವೃದ್ಧಿ ಕೆಲಸಗಳು ಕಾರ್ಯಗಳು ಸೀಮಿತತೆಗೆ ಒಳಪಟ್ಟಿದ್ದರೂ ಶ್ರೀದೇವರ ಅನುಗ್ರಹದ ಕಾರಣವಾಗಿ ಇಂದು ವಿಸ್ತöÈತತೆಯನ್ನು ಪಡೆದಿರುವುದು ಸಂತೋಷದ ವಿಚಾರ. ಇದಕ್ಕೆ ಪೂರಕವೆನ್ನುವಂತೆ ಭಕ್ತರು ಈಗಾಗಲೇ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ತಿಳಿಸಿರುವುದರಿಂದ ಒಳಗಿನ ಅಂಗಣದ ಕೆಲಸ ಕಾರ್ಯಗಳು ಹಾಗೂ ದೇವಾಲಯದ ಪರಿವಾರ ದೇವರ ಗುಡಿಗಳಲ್ಲಿರುವ ಕೆಲಸ ಕಾರ್ಯಗಳು ದೇವಸ್ಥಾನದ ಮುಂಭಾಗದಲ್ಲಿ ಆಗುವಂತಹ ಕಾಮಗಾರಿ ಬಗೆಗೆ ಸವಿಸ್ತಾರವಾಗಿ ತಿಳಿಸುತ್ತಾ ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಮಾಹಿತಿಯನ್ನು ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಶ್ರೀ ಉಮೇಶ್ ಅತಿಕಾರಿಯವರು ವಿವಿಧ ಸಮಿತಿ ಪ್ರಮುಖರನ್ನು ಸಭೆಯಲ್ಲಿ ಗುರುತಿಸಿ, ಅವರು ಮುಂದಕ್ಕೆ ಸಂಪೂರ್ಣ ಸಮಿತಿಯನ್ನು ರಚಿಸುವಂತೆ ಕೋರಿದರು.
ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನಾಗೇಶ್ ಕೆ. ರವರು ಶುಭಕೋರಿದರು. ಕಾರ್ಯಕ್ರಮವನ್ನು ಶ್ರೀ ಲಕ್ಷ್ಮಿ ಸುವರ್ಣ ನಿರೂಪಿಸಿದರು.












