ಇತ್ತೀಚಿನ ಸುದ್ದಿ
ಪಾಕ್ಗೆ ಪೋಲಾಗುತ್ತಿದ್ದ ಸಿಂಧೂ ನದಿ ನೀರನ್ನು ಲಡಾಕ್ಗೆ ಬಳಸಿಕೊಂಡ ಮೋದಿ ಸರ್ಕಾರ: ಕೃಷಿ ಕ್ರಾಂತಿಗೆ ಸಾಕ್ಷಿಯಾಯ್ತು ಭಾರತ
22/08/2026, 18:07
ನವದೆಹಲಿ(reporterkarnataka.com): ಸಿಂಧೂ ಜಲ ಒಪ್ಪಂದವು (IWT) ಭಾರತಕ್ಕೆ ಎಷ್ಟು ಹಾನಿಕಾರಕವಾಗಿತ್ತು ಎಂಬುದಕ್ಕೆ ಈಗ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಸಾಕ್ಷಿ ಒದಗಿಸಿದೆ. ಸಿಂಧು ನದಿಯಲ್ಲಿ ಈವರೆಗೆ ವ್ಯರ್ಥವಾಗಿ ಪಾಕಿಸ್ತಾನದತ್ತ ಹರಿದುಹೋಗುತ್ತಿದ್ದ ಹಿಮನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಲಡಾಖ್ ಆಡಳಿತವು ತನ್ನ ಚಿತ್ರಣವನ್ನೇ ಬದಲಾಯಿಸಿಕೊಂಡಿದೆ. ಪಕ್ಷಭೇದ ಮರೆತು ಈ ಮಹತ್ಕಾರ್ಯವನ್ನು ಕೊಂಡಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಲಡಾಖ್ ಆಡಳಿತಕ್ಕೆ ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಿಂಧೂ ಜಲ ಒಪ್ಪಂದದ ರದ್ದತಿ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಪಾಕಿಸ್ತಾನದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಕೂಗಾಟ ನಡೆಸುತ್ತಿರುವ ಪಾಕಿಸ್ತಾನಕ್ಕೆ, ಈ ಒಪ್ಪಂದವು ಇಷ್ಟು ವರ್ಷಗಳ ಕಾಲ ಹೇಗೆ ಏಕಪಕ್ಷೀಯವಾಗಿ ಲಾಭ ತಂದುಕೊಡುತ್ತಿತ್ತು ಎಂಬುದನ್ನು ಭಾರತ ಈಗ ಜಗತ್ತಿಗೆ ತೋರಿಸಿಕೊಟ್ಟಿದೆ. ತನ್ನ ಸ್ವಂತ ಭೂಮಿ ಮತ್ತು ಜನರ ಹಿತಾಸಕ್ತಿಯನ್ನು ಬಲಿ ಕೊಟ್ಟು, ಶತ್ರು ರಾಷ್ಟ್ರಕ್ಕಾಗಿ ಭಾರತವು ಬರೋಬ್ಬರಿ 65 ವರ್ಷಗಳ ಕಾಲ ತನ್ನ ನೈಸರ್ಗಿಕ ಜಲಸಂಪನ್ಮೂಲವನ್ನು ಹರಿಯಲು ಬಿಟ್ಟಿತ್ತು. ಆದರೆ, ಕೇವಲ ಒಂದು ವರ್ಷದ ಅವಧಿಯಲ್ಲಿ ಲಡಾಖ್ನಲ್ಲಿ ಅದ್ಭುತ ಬದಲಾವಣೆ ಸೃಷ್ಟಿಯಾಗಿದ್ದು, ಸಿಂಧು ನದಿಗೆ ಹರಿದು ಪೋಲಾಗುತ್ತಿದ್ದ ನೀರಿನಿಂದಲೇ ಅಲ್ಲಿನ ರೈತರು ತಮ್ಮ ಜಮೀನುಗಳಿಗೆ ನೀರುಣಿಸುತ್ತಿದ್ದಾರೆ.
*ಹಿಮನದಿ ನೀರು ಸದ್ಬಳಕೆ: ಲಡಾಖ್ನ ಭಾಗ್ಯೋದಯ*
ಲಡಾಖ್ಗೆ ತಲುಪುತ್ತಿದ್ದ ಹಿಮನದಿಯ ನೀರಿನ ಪೈಕಿ ದಿನನಿತ್ಯ ಸುಮಾರು 9 ಕೋಟಿ ಲೀಟರ್ನಷ್ಟು ನೀರು ಸಿಂಧೂ ನದಿಯನ್ನು ಸೇರಿ ವ್ಯರ್ಥವಾಗಿ ಪಾಕಿಸ್ತಾನದತ್ತ ಹರಿದುಹೋಗುತ್ತಿತ್ತು. ಪಾಕಿಸ್ತಾನ ಎಂದಿಗೂ ಸಿಂಧು ನದಿಯ ನೀರನ್ನು ದಕ್ಷತೆಯಿಂದ ಬಳಸಿಕೊಳ್ಳದೆ ಪೋಲು ಮಾಡಿತ್ತು. ಆದರೆ, ಸಿಂಧು ಜಲ ಒಪ್ಪಂದ ಸ್ಥಗಿತಗೊಂಡ ಬಳಿಕ ಲಡಾಖ್ ಆಡಳಿತವು ದಿಟ್ಟ ಹೆಜ್ಜೆ ಇಟ್ಟು ಪರಿಸ್ಥಿತಿಯನ್ನು ಬದಲಾಯಿಸಿದೆ. ಪರಿಣಾಮವಾಗಿ, ಸಿಂಧು ನದಿಗೆ ಹರಿದು ವ್ಯರ್ಥವಾಗುತ್ತಿದ್ದ ಹಿಮನದಿಯ ನೀರು ಈಗ ದಿನಕ್ಕೆ ಕೇವಲ 50 ಲಕ್ಷ ಲೀಟರ್ಗೆ ಕುಸಿದಿದೆ.












