ಇತ್ತೀಚಿನ ಸುದ್ದಿ
ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್ಎಸ್ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸವಾಲು
20/08/2026, 18:58
ಬೆಂಗಳೂರು (reporterkarnataka.com): ವಂದೇ ಮಾತರಂ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಆರ್ಎಸ್ಎಸ್ ಹಾಗೂ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕಟು ಸವಾಲು ಎಸೆದಿದ್ದಾರೆ.
ಧೈರ್ಯವಿದ್ದರೆ ತಮ್ಮ ಆರ್ಎಸ್ಎಸ್ ಶಾಖೆಗಳು ಹಾಗೂ ಕಚೇರಿಗಳಲ್ಲಿ ಸಂಘದ ಗೀತೆಯ ಬದಲಿಗೆ ರಾಷ್ಟ್ರಗೀತೆಯನ್ನು ಹಾಡಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (CWC) ನಿರ್ಧಾರದಂತೆ ತಾವು ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದಾಗಿ ಸ್ಪಷ್ಟಪಡಿಸಿದರು. ಬಿಜೆಪಿಯವರು ಎಷ್ಟೇ ಕಾನೂನು ತಂದರೂ ಅಥವಾ ಜೈಲಿಗಟ್ಟಿದರೂ ತಾವು ನಿಯಮಿತ ಎರಡು ಚರಣಗಳನ್ನಷ್ಟೇ ಹಾಡುವುದಾಗಿ ಸಮರ್ಥಿಸಿಕೊಂಡರು. ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಬಿಜೆಪಿಯವರು ದೇಶದ್ರೋಹಿಗಳು, ರಣಹೇಡಿಗಳು ಹಾಗೂ ದಲಿತ ವಿರೋಧಿಗಳು ಎಂದು ಕಟುವಾಗಿ ವಿಮರ್ಶಿಸಿದರು. ಕೇವಲ ರಾಜಕೀಯ ಲಾಭಕ್ಕಾಗಿ ವಂದೇ ಮಾತರಂ ವಿಚಾರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಇದಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಬಿಜೆಪಿಯವರು ಸ್ವಚ್ಛಗೊಳಿಸಿದ ಘಟನೆಯನ್ನು ಪ್ರಸ್ತಾಪಿಸಿದ ಅವರು, ಬಿಜೆಪಿಗೆ ಎಸ್ಸಿ/ಎಸ್ಟಿ ಹಾಗೂ ವಾಲ್ಮೀಕಿ ಸಮುದಾಯ ಕಂಡರೆ ಆಗುವುದಿಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದರು. ಪ್ರಸ್ತುತ ನಡೆಯುತ್ತಿರುವ ವಾಲ್ಮೀಕಿ ನಿಗಮದ ಹಗರಣದ ಹೋರಾಟದ ಹಿನ್ನೆಲೆಯಲ್ಲೂ ರಾಜ್ಯ ರಾಜಕೀಯ ತೀವ್ರಗೊಂಡಿದೆ.













