ಇತ್ತೀಚಿನ ಸುದ್ದಿ
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು
19/08/2026, 18:50
ವಿಜಯನಗರ(reporterkarnataka.com): ಇಲ್ಲಿನ ತಂಬ್ರಹಳ್ಳಿ ಸಮೀಪದ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು ತೆಪ್ಪದಲ್ಲಿ ತೆರಳಿದ್ದ ಒಂದೇ ಕುಟುಂಬದ ಮೂವರು ಸಹೋದರರು ನೀರುಪಾಲಾಗಿರುವ ದುರಂತ ಘಟನೆ ನಡೆದಿದೆ.
ತಂಬ್ರಹಳ್ಳಿ ಗ್ರಾಮದ ನಿವಾಸಿಗಳಾದ ಅಜ್ಜಪ್ಪ (30), ಯಮನೂರಪ್ಪ (26) ಮತ್ತು ರಾಜು (24) ನೀರುಪಾಲಾದ ದುರ್ದೈವಿಗಳು. ಇವರಲ್ಲಿ ಯಮನೂರಪ್ಪ ಎಂಬುವವರ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಸಹೋದರರಾದ ಈ ಮೂವರು ಯುವಕರು ಎಂದಿನಂತೆ ಮಂಗಳವಾರ ಮಧ್ಯಾಹ್ನ ತುಂಗಭದ್ರಾ ನದಿಯ ಹಿನ್ನೀರಿನ ಮೀನು ಹಿಡಿಯಲು ತೆಪ್ಪದಲ್ಲಿ ತೆರಳಿದ್ದರು. ಈ ವೇಳೆ ಬೀಸಿದ ಭಾರಿ ಗಾಳಿಯ ರಭಸಕ್ಕೆ ತೆಪ್ಪ ಮಗುಚಿ ಬಿದ್ದಿದ್ದು, ಮೂವರೂ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ರಾತ್ರಿಯಾದರೂ ಯುವಕರು ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ತಂಬ್ರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ಜತೆಗೂಡಿ ಹಿನ್ನೀರಿನಲ್ಲಿ ತೀವ್ರ ಶೋಧ ಕಾರ್ಯ ಕೈಗೊಳ್ಳಲಾಯಿತು. ಬುಧವಾರ ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಯಮನೂರಪ್ಪನ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರು ಯುವಕರ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












