12:34 PM Sunday16 - August 2026
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ

ಇತ್ತೀಚಿನ ಸುದ್ದಿ

ಸ್ಲೋವಾಕಿಯಾದಲ್ಲಿರುವ ಕರ್ನಾಟಕದ ಉದ್ಯೋಗಿಗಳೊಂದಿಗೆ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಸಂವಾದ

03/12/2025, 20:49

*ಕರ್ನಾಟಕದಿಂದ ಹೆಚ್ಚಿನ ಕೌಶಲ್ಯಶಾಲಿ ಉದ್ಯೋಗಿಗಳ ಬೇಕಾಗಿದೆ ಎಂದ ಸ್ಲೋವಾಕಿಯಾ ಕಂಪನಿಗಳು*

* ಫೋರ್ಕ್‌ಲಿಫ್ಟ್ ಆಪರೇಟರ್‌ಗಳಿಗೆ ಹೆಚ್ಚಿನ ಬೇಡಿಕೆ: ಡಿಎಚ್‌ಎಲ್‌

* ಸಚಿವರ ನಿಯೋಗದಲ್ಲಿ ಸಚಿವ ಡಾ. ಸುಧಾಕರ್‌, ಹಿರಿಯ ಅಧಿಕಾರಿಗಳು

ಬ್ರಾಟಿಸ್ಲಾವಾ (reporterkarnataka.com): ಕರ್ನಾಟಕದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ತರಬೇತಿ ಪಡೆದು ಅತ್ಯುನ್ನತ ಮಟ್ಟದಕೌಶಲ್ಯ ತರಬೇತಿ ಪಡೆದುಕೊಳ್ಳುತ್ತಿರುವ ಉದ್ಯೋಗಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಹೇಳಿದ್ದಾರೆ.

ಬ್ರಾಸಿಸ್ಲಾವಾದಲ್ಲಿರುವ ಸಿಟ್ರೊಯೆನ್‌ C3, C3 ಏರ್‌ಕ್ರಾಸ್ ಮತ್ತು ಒಪೆಲ್ ಫ್ರಾಂಟೆರಾ ಮಾದರಿಗಳ ವಾಹನ ತಯಾರಕ ಸಂಸ್ಥೆಯಾದ ಸ್ಟೆಲ್ಲಾಂಟಿಸ್ ಈಗಾಗಲೇ ಆಟೊಮೊಬೈಲ್‌ ವಿದ್ಯುತ್ ಕೌಶಲ್ಯ ತರಬೇತಿ ಹೊಂದಿದವರನ್ನು ಕಳುಹಿಸಿಕೊಡಬೇಕೆಂದು ಮನವಿ ಮಾಡಿದೆ.
ಬ್ರಾಟಿಸ್ಲಾವಾ ಬಳಿಯ ತ್ರ್ವಾನಾ ಘಟಕದಲ್ಲಿ ಈಗಾಗಲೇ ಕರ್ನಾಟಕದ ಸುಮಾರು 100 ಅಸೆಂಬ್ಲಿ-ಲೈನ್ ಆಪರೇಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಫೆಬ್ರವರಿ 2026ರಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಉದ್ಯೋಗ ಮೇಳಕ್ಕೆ ಪೂರ್ವಭಾವಿಯಾಗಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್, ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಯುರೋಪ್‌ ಖಂಡದ ಪ್ರವಾಸ ಕೈಗೊಂಡಿದ್ದು, ರೋಡ್ ಶೋ ನಡೆಸಿ, ವಿವಿಧ ನಗರಗಳಿಗೂ ಭೇಟಿ ನೀಡುತ್ತಿದ್ದಾರೆ.
ಮಂಗಳವಾರ ಸಂಜೆ ಹಾಗು ಬುಧವಾರ ಸ್ಟೆಲ್ಲಾಂಟಿಸ್‌ಗೆ ಭೇಟಿ ನೀಡಿದ ಉಭಯ ಸಚಿವರು, ಕರ್ನಾಟಕದ ಉದ್ಯೋಗಿಗಗಳಿಗೆ ಸ್ಥಾವರದಲ್ಲಿ ನೀಡುತ್ತಿರುವ ಸೌಲಭ್ಯಗಳು ಮತ್ತು ಇತರೆ ವ್ಯವಸ್ಥೆಯ ಕುರಿತು ಪರಿಶೀಲಿಸಿದರು.

*ಅಸೆಂಬ್ಲಿ ಲೈನ್‌ ಆಪರೇಟರ್‌ಗಳಿಗೆ ಅವಕಾಶ:*
ಪ್ರಸ್ತುತ, ಕಂಪನಿಯು ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ)ದ ವತಿಯಿಂದ ತರಬೇತಿ ಪಡೆದಿರುವ ಕೌಶಲ್ಯಪೂರ್ಣ 100 ಅಸೆಂಬ್ಲಿ-ಲೈನ್ ಆಪರೇಟರ್‌ಗಳನ್ನು ನೇಮಿಸಿಕೊಂಡಿದೆ. 50ಕ್ಕೂ ಹೆಚ್ಚು ಹೆವಿ ವೆಹಿಕಲ್ ಡ್ರೈವರ್‌ಗಳನ್ನೂ ನೇಮಿಸಲಾಗಿದೆ. ಉದ್ಯೋಗಿಗಳ ವಲಸೆ ಮತ್ತು ನಿಯೋಜನೆ ಹಾಗೂ ಇತರೆ ಸೌಲಭ್ಯವನ್ನು ಕರ್ನಾಟಕ ಅಂತರರಾಷ್ಟ್ರೀಯ ವಲಸೆ ಕೇಂದ್ರ (IMC-K) ಸುಗಮಗೊಳಿಸಿದೆ.

*ಉದ್ಯೋಗಿಗಳಿಂದ ಸರ್ಕಾರಕ್ಕೆ ಧನ್ಯವಾದ:*
ಈಗ ಸ್ಲೋವಾಕಿಯಾದಲ್ಲಿ ಉದ್ಯೋಗ ಪಡೆದಿರುವ ಕಲಬುರಗಿ ಜಿಲ್ಲೆಯ ಸೇಡಂನ ಸುನಿಲ್ ಕುಮಾರ್, ಕೆವಿಟಿಎಸ್‌ಡಿಸಿಗೆ ಕೃತಜ್ಞತೆ ಸಲ್ಲಿಸಿ, ಈ ಉಪಕ್ರಮವು ಸ್ಥಿರ ಆದಾಯ ಮತ್ತು ಉತ್ತಮ ಕೆಲಸ ಒದಗಿಸಿದೆ ಎಂದು ಹೇಳಿದರು.
ಧಾರವಾಡ ಜಿಲ್ಲೆಯ ಕಲಘಟಗಿಯ ರೋಹನ್ ಲಗಾಲಿ ಕೂಡ ಸರ್ಕಾರಕ್ಕೆ ಹಾಗೂ ಸಚಿವರಿಗೂ ಧನ್ಯವಾದ ಅರ್ಪಿಸಿದರು.
ತ್ರ್ವಾನಾ ಸ್ಥಾವರದಲ್ಲಿ ಪ್ರತಿದಿನ 4,000 ಕ್ಕೂ ಹೆಚ್ಚು ಕಾರ್ಮಿಕರು ಸುಮಾರು 1,300 ವಾಹನಗಳನ್ನು ತಯಾರಿಸುತ್ತಿದ್ದಾರೆ.

*ನಮ್ಮ ಹುಡುಗರು ಈಗ ಜಾಗತಿಕ ಮಟ್ಟಕ್ಕೇರಿದ್ದಾರೆ:*
ನಂತರ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್, ನಮ್ಮ ಕರ್ನಾಟಕದ ಯುವ ಸಮೂಹವನ್ನು ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸುವ ಅವಕಾಶ ಹೆಚ್ಚಿಸಲು ತರಬೇತಿ ನೀಡಲಾಗುತ್ತಿದೆ. ಇಂಗ್ಲಿಷ್, ಜರ್ಮನ್ ಮತ್ತು ಇಟಾಲಿಯನ್ ಭಾಷಾ ತರಬೇತಿ ನೀಡಲಾಗುತ್ತಿದೆ ಇದರಿಂದ ಎಲ್ಲರಿಗೂ ಅನುಕೂಲವಾಗಿದೆ. ನಮ್ಮ ರಾಜ್ಯದ ಯುವ ಸಮೂಹ ಈಗ ಜಾಗತಿಕ ಮಟ್ಟಕ್ಕೇರುತ್ತಿದೆ ಎಂದರು.
ಸ್ಟೆಲ್ಲಾಂಟಿಸ್ ನೇಮಕಾತಿ ಮುಖ್ಯಸ್ಥರಾದ ಕತ್ರಿನಾ ಫೆಲ್ಕೋವಾ ಅವರು, ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸ್ಲೋವಾಕಿಯಾದಲ್ಲಿ ಭಾರತೀಯ ರಾಯಭಾರಿ ಅಪೂರ್ವ ಶ್ರೀವಾಸ್ತವ ಅವರನ್ನು ಒತ್ತಾಯಿಸಿದರು.
ಕರ್ನಾಟಕದಿಂದ ವಾರ್ಷಿಕವಾಗಿ ಒಂದು ಲಕ್ಷಕ್ಕೂ ಹೆಚ್ಚು ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸಬೇಕು. ಅಲ್ಲದೇ ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ಆರಂಭಿಸಿದರೆ ಎಲ್ಲ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಡಾ. ಪಾಟೀಲ್‌ ಮತ್ತು ಡಾ. ಸುಧಾಕರ್‌ ತಿಳಿಸಿದರು.

*ಫೋರ್ಕ್‌ಲಿಫ್ಟ್ ಆಪರೇಟರ್‌ಗಳಿಗೆ ಡಿಎಚ್‌ಎಲ್‌ (DHL) ಬೇಡಿಕೆ*

ಬ್ರಾಟಿಸ್ಲಾವಾ ಬಳಿಯ ನಿಟ್ರಾದಲ್ಲಿ ಮತ್ತೊಂದು ಸಭೆ ನಡೆಸಿದರು. ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಡಿಎಚ್‌ಎಲ್‌ ಈಗ ಮತ್ತಷ್ಟು ಉದ್ಯೋಗಿಗಳಿಗೆ ಬೇಡಿಕೆ ಸಲ್ಲಿಸಿದೆ.

ಭಾರೀ ಫೋರ್ಕ್‌ಲಿಫ್ಟ್ ಆಪರೇಟರ್‌ಗಳಿಗೆ ಯುರೋಪಿನಾದ್ಯಂತ ಹೆಚ್ಚು ಬೇಡಿಕೆ ಇದೆ. ಕರ್ನಾಟಕದ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಪೂರೈಸಬೇಕು ಎಂದು ಸಚಿವರ ಮುಂದೆಯೇ ಡಿಎಚ್‌ಎಲ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲೋಸ್ ಗೋಸಿಕ್ ಬೇಡಿಕೆ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರಾದ ಡಾ. ಶರಣಪ್ರಕಾಶ್‌ ಪಾಟೀಲ್‌, ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮವು ಈ ಪ್ರಸ್ತಾವನೆಯನ್ನು ಅಧ್ಯಯನ ಮಾಡುತ್ತದೆ ಮತ್ತು ನಿಗದಿತ ಪಠ್ಯಕ್ರಮದಲ್ಲಿ ಫೋರ್ಕ್‌ಲಿಫ್ಟ್ ತರಬೇತಿಯನ್ನೂ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಿವಕಾಂತಮ್ಮ ನಾಯಕ್ ಮತ್ತು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಎಂ. ನಾಗರಾಜ್, ಕ್ರಿಸ್ತಗೌಡ ತಾಯಣ್ಣವರ್, ರಾಮೇಗೌಡ ಮತ್ತು KS ಅವಿನಾಶ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು