9:11 PM Saturday25 - April 2026
ಬ್ರೇಕಿಂಗ್ ನ್ಯೂಸ್
ಶಿವಮೊಗ್ಗ | ಹುಡುಗಿ ವಿಚಾರಕ್ಕೆ ಅಪ್ರಾಪ್ತನಿಗೆ ಲಾಂಗಿನೇಟು: ತಲೆಗೇ ಸಿಲುಕಿಕೊಂಡ ಲಾಂಗ್ ಕಾಂತಾರ ದೈವ ಪಾತ್ರದ ಅನುಕರಣೆ ವಿವಾದ: ಬಾಲಿವುಡ್ ನಟ ರಣವೀರ್ ಚಾಮುಂಡೇಶ್ವರಿಯಲ್ಲಿ ಕ್ಷಮೆ… ಚಿಕ್ಕಮಗಳೂರು: ಸೊಪ್ಪು ತರಲು ಹೋದ ವೃದ್ಧೆ ಹೇಮಾವತಿ ನದಿಯಲ್ಲಿ ನೀರುಪಾಲು ಮೇಕೆದಾಟು ಕಾವೇರಿ ಸಂಗಮದಲ್ಲಿ ಆಟವಾಡುತ್ತಿದ್ದವರ ಮೇಲೆ ನುಗ್ಗಿಬಂದ ಕಾಡಾನೆ: ಎದ್ದು ಬಿದ್ದೋಡಿದ ಪ್ರವಾಸಿಗರು Kodagu | ವಿರಾಜಪೇಟೆ: 9 ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ ಅರಣ್ಯ ಇಲಾಖೆ ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್

ಇತ್ತೀಚಿನ ಸುದ್ದಿ

ಕಾಂತಾರ ದೈವ ಪಾತ್ರದ ಅನುಕರಣೆ ವಿವಾದ: ಬಾಲಿವುಡ್ ನಟ ರಣವೀರ್ ಚಾಮುಂಡೇಶ್ವರಿಯಲ್ಲಿ ಕ್ಷಮೆ ಕೇಳಲಿದ್ದಾರೆ!

25/04/2026, 20:28

ಬೆಂಗಳೂರು(reporterkarnataka.com): ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರವನ್ನು ಅಣಕಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿನ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಣವೀರ್ ಸಿಂಗ್ ಪರ ಸುಪ್ರೀಂ ಕೋರ್ಟನ ಪದಾಂಕಿತ ಹಿರಿಯ ವಕೀಲ ಸಜನ್ ಪೂವಯ್ಯ ಅವರು, “ಮೈಸೂರಿನಲ್ಲಿರುವ ಚಾಮುಂಡಿ ದೇವಸ್ಥಾನಕ್ಕೆ ರಣವೀರ್ ಖಂಡಿತಾ ಭೇಟಿ ನೀಡಲಿದ್ದಾರೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಹೊರಗೆ ಸಲೀಸಾಗಿ ಸುತ್ತಾಡಲು ಕಷ್ಟವಾಗಿದೆ. ಭೇಟಿಯ ದಿನಾಂಕ ಆಖೈರುಗೊಳಿಸಲು ವಿಳಂಬವಾಗುತ್ತಿದೆ” ಎಂದರು.
ಇದಕ್ಕೆ ವಕೀಲರೂ ಆದ ದೂರುದಾರ ಪ್ರಶಾಂತ ಮೆಥಲ್ ಅವರು, “ಕರ್ನಾಟಕ ಪೊಲೀಸರು ಬಹಳಷ್ಟು ಪವರ್ ಫುಲ್ ಇದ್ದಾರೆ ಮತ್ತು ಬಹಳಷ್ಟು ಸುರಕ್ಷತೆಯನ್ನೂ ಒದಗಿಸಬಲ್ಲವರಾಗಿದ್ದಾರೆ. ಅಷ್ಟಕ್ಕೂ, ಬೇಕಾದರೆ ರಣವೀರ್ ಖಾಸಗಿ ಭದ್ರತಾ ಸಿಬ್ಬಂದಿ ನೆರವು ಪಡೆಯಲಿ” ಎಂದರು.
ಕೂಡಲೇ ಈ ಮಾತಿಗೆ ತಡೆ ಹಾಕಿದ ನ್ಯಾ.ನಾಗಪ್ರಸನ್ನ ಅವರು, “ಕರ್ನಾಟಕ ಪೊಲೀಸರು ಎಷ್ಟು ಪವರ್ ಫುಲ್ ಎಂಬುದನ್ನು ನಾನು ದಿನಾ ನೋಡ್ತಾನೇ ಇದ್ದೀನಿ. ಇವರೆಲ್ಲಾ ಬರೀ 69ರ ಪ್ರಕರಣಗಳನ್ನೇ ಬೆನ್ನುಹತ್ತುತ್ತಾ ನಿಜವಾದ ಅಪರಾಧಗಳ ತನಿಖೆಯನ್ನೇ ಮಾಡುತ್ತಿಲ್ಲ. ಇವರ ಕ್ಷಮತೆ ಎಲ್ಲಾ ಗೊತ್ತಿದೆ ಬಿಡಿ” ಎಂದು ಕುಟುಕಿದರು.
ಅಂತಿಮವಾಗಿ ರಣವೀರ್ ಸಿಂಗ್ ಅವರ ಬೇಷರತ್ ಕ್ಷಮಾಪಣೆಯ ಪ್ರಮಾಣ ಪತ್ರವನ್ನು ಸ್ವೀಕರಿಸಿದ ನ್ಯಾಯಮೂರ್ತಿಗಳು, ರಣವೀರ್ ಒಂದು ತಿಂಗಳ ಒಳಗಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಬಗ್ಗೆ ನಿರ್ದೇಶನ ನೀಡುವುದಾಗಿ ತಿಳಿಸಿ ಅರ್ಜಿ ವಿಲೇವಾರಿ ಮಾಡಿದರು. ದೂರುದಾರರ ಪರ ವಕಾಲತ್ತು ವಹಿಸಿರುವ ಹೈಕೋರ್ಟ್ ವಕೀಲ ಶಿಜಿ ಮಲಯಾಳಿ ಹಾಜರಿದ್ದರು.

*ಪ್ರಕರಣವೇನು?*
ಗೋವಾದಲ್ಲಿ 2025ರ ನವೆಂಬರ್ 28ರಂದು ನಡೆದಿದ್ದ “ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ” (ಐಎಫ್‌ಎಫ್‌ಐ) ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಅವರು ‘ಕಾಂತಾರ ಚಾಪ್ಟರ್‌-1’ ಚಿತ್ರದ ಬಗ್ಗೆ ವೇದಿಕೆಯಲ್ಲಿ ಮಾತನಾಡುವ ವೇಳೆ ಚಾಮುಂಡಿ ದೈವದ ಕುರಿತು ಅಪಹಾಸ್ಯದ ನುಡಿಗಳನ್ನು ಆಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ನಗರದ ವಕೀಲ ಪ್ರಶಾಂತ್‌ ಮೆಥಲ್‌ ಅವರು 1ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ರಣವೀರ್ ಸಿಂಗ್, “ನನ್ನ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು” ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

*ಪ್ರಮಾಣ ಪತ್ರದ ಮುಖ್ಯಾಂಶಗಳು:*
“ನಾನು (ರಣವೀರ್ ಸಿಂಗ್) ಮುಂಬೈನ ಸಿಂಧಿ ಕುಟುಂಬದಲ್ಲಿ ಬೆಳೆದವನು. ಘಟನೆ ನಡೆದ ದಿನದಂದು ನಾನು ದೈವದ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದೇನೆ ಎನ್ನುವುದು ನನಗೆ ಅರಿವಾಗಿರಲಿಲ್ಲ. ಅದರ ಸೂಕ್ಷ್ಮತೆಗಳ ಬಗ್ಗೆಯೂ ನನಗೆ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಆದ್ದರಿಂದ, ಈ ಪ್ರಮಾಣ ಪತ್ರದ ಮೂಲಕ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಘಟನೆಗಾಗಿ ನನ್ನ ಪ್ರಾಮಾಣಿಕ ಬೇಷರತ್ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಮೈಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತೇನೆ ಮತ್ತು ನನ್ನ ಭಕ್ತಿಯನ್ನು ವ್ಯಕ್ತಪಡಿಸುತ್ತೇನೆ. ವಿಷಯದ ಗಂಭೀರತೆ ಅರಿವಾದ ಕೂಡಲೇ ನಾನು ಬಹಿರಂಗವಾಗಿ ಬೇಷರತ್ ಕ್ಷಮೆ ಯಾಚಿಸಿದ್ದೇನೆ” ಎಂಬ ಅಂಶವನ್ನು ರಣವೀರ್ ಪ್ರಮಾಣ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು