ಇತ್ತೀಚಿನ ಸುದ್ದಿ
Bantwal | ಪುಳಿಂಚ ರಾಮಯ್ಯ ಶೆಟ್ಟಿ ಸ್ಮರಣಾರ್ಥ ಪಂಚಮ ತ್ರೈ ವಾರ್ಷಿಕ ಪುಳಿಂಚ ಪ್ರಶಸ್ತಿ ಪ್ರದಾನ ಧಾರ್ಮಿಕ ಸಭೆ
25/05/2025, 20:22

ಬಂಟ್ವಾಳ(reporterkarnataka.com): ಶ್ರೀ ಕಲ್ಲುರ್ಟಿ ದೈವಸ್ಥಾನ ಚೆಂಡೆ , ಪುಳಿಂಚ ಸೇವಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಪ್ರಸಿದ್ದ ಯಕ್ಷಗಾನ ಕಲಾವಿದ ಬೆಜ್ಜದ ಗುತ್ತು ಪುಳಿಂಚ ರಾಮಯ್ಯ ಶೆಟ್ಟಿಯವರ ಸ್ಮರಣಾರ್ಥ ಪಂಚಮ ತ್ರೈ ವಾರ್ಷಿಕ ಪುಳಿಂಚ ಪ್ರಶಸ್ತಿ ಪ್ರದಾನ ಧಾರ್ಮಿಕ ಸಭೆಯನ್ನು
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ರಾಮಯ್ಯ ಶೆಟ್ಟಿಯವರು ಪರಂಪರೆಯನ್ನು ಉಳಿಸಿದವರು. ಯಕ್ಷಗಾನದ ಮೂಲಕ ಆಧ್ಯಾತ್ಮದ ಚಿಂತನೆಯನ್ನು ವೈಚಾರಿಕ ಚಿಂತನೆಯನ್ನು ಸರ್ವ ಸಾಮಾನ್ಯ ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡಿದವರು ಎಂದು ಹೇಳಿದರು.
ರಾಮಯ್ಯ ಶೆಟ್ಟಿಯವರ ಮಗ ಸೊಸೆ ಆ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ. ಒಳ್ಳೆಯ ಜೀವನ ನಡೆಸಲು ಇರುವ ಸೂತ್ರವೇ ಧರ್ಮ ಎಂದು ತಿಳಿಸಿದರು.
ವೇದಿಕೆಯಲ್ಲಿ ಆರ್.ಎಸ್.ಎಸ್ ಮುಖಂಡ ಪ್ರಕಾಶ್ ಪಿ.ಎಸ್ , ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಂಗಳೂರಿನ ದೈವಜ್ಞ ಶಶಿಕುಮಾರ್ ಪಂಡಿತ್, ಪುಳಿಂಚ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ, ಪುಳಿಂಚ ಚಿಟ್ಸ್ ಮ್ಯಾನೆಜಿಂಗ್ ಡೈರೆಕ್ಟರ್ ಪ್ರತಿಭಾ ಶೆಟ್ಟಿ, ಉಪಸ್ಥಿತರಿದ್ದರು.
ಹಿರಿಯ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಮಿಜಾರು ತಿಮ್ಮಪ್ಪ ಅವರಿಗೆ ಪುಳಿಂಚ ಪ್ರಶಸ್ತಿ ಹಾಗೂ ದಿ.ಜಯರಾಮ ಆಚಾರ್ಯ ಬಂಟ್ವಾಳ ಅವರಿಗೆ ನೀಡಿದ ಮರಣೋತ್ತರ ಪುಳಿಂಚ ಪ್ರಶಸ್ತಿಯನ್ನು ಅವರ ಪತ್ನಿ ಶ್ಯಾಮಲ ಸ್ವೀಕರಿಸಿದರು.
ನ್ಯಾಯವಾದಿ ಹಾಗೂ ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿ ಪ್ರಸ್ತಾವನೆಗೈದರು. ಯಕ್ಷಾಂಗಣದ ಅಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಹಾಗೂ ಸಂಜಯಕುಮಾರ್ ಅವರು ಸಂಸ್ಮರಣಾ ಭಾಷಣ ಮಾಡಿದರು.
ಸಮಾರಂಭದಲ್ಲಿ ಚೆಂಡೆ ಶ್ರೀ ಕಲ್ಲುರ್ಟಿ ತಾಯಿಯ ಕುರಿತು ಕೃತಿ ಹಾಗೂ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಅರ್ಥಧಾರಿ ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಹಾಸ್ಯ ಪ್ರಸಂಗ, ಬಲೆ ತೆಲಿಪುಲೆ ಹಾಸ್ಯ ವೈಭವ, ಪುದರ್ ದೀತಿಜಿ ತುಳು ನಾಟಕದ ಬಳಿಕ ಕೋಲ ಸೇವೆ ನಡೆಯಿತು.