ಇತ್ತೀಚಿನ ಸುದ್ದಿ
ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ: ಮಾಜಿ ಪ್ರಧಾನಿ ದೇವೇಗೌಡ
10/06/2026, 20:25
ಬೆಂಗಳೂರು(reporterkarnataka.com): ರಾಜ್ಯಸಭಾ ಟಿಕೆಟ್ ಸಿಗದ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ತೆರೆ ಎಳೆದಿದ್ದಾರೆ. ‘ನನಗೆ ರಾಜ್ಯಸಭಾ ಸದಸ್ಯನಾಗಬೇಕು ಎಂಬ ಯಾವುದೇ ವ್ಯಾಮೋಹವಿಲ್ಲ. ನನ್ನ ರಾಜಕೀಯ ಜೀವನದ ಎಪ್ಪತ್ತು ವರ್ಷಗಳ ಸುದೀರ್ಘ ಪಯಣದಲ್ಲಿ ಅಧಿಕಾರಕ್ಕಿಂತ ಜನಸೇವೆಯೇ ಮುಖ್ಯವಾಗಿತ್ತು’ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
*7 ದಶಕಗಳ ರಾಜಕೀಯ ಪಯಣದ ಮೆಲುಕು:*
ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ಸ್ಮರಿಸಿದ ಗೌಡರು, ‘ನಾನು ರಾಜಕಾರಣಕ್ಕೆ ಬಂದು ಎಷ್ಟು ವರ್ಷವಾಯಿತು ಎಂದು ಒಮ್ಮೆ ಯೋಚಿಸಿ. 1954-55 ರಿಂದಲೇ ನಾನು ಸಕ್ರಿಯ ರಾಜಕಾರಣದಲ್ಲಿದ್ದೇನೆ. ಅಂದು ಕೇವಲ ಗುತ್ತಿಗೆ ಕೆಲಸ ಮಾಡುತ್ತಿದ್ದ ನಾನು, ಅದರ ಜೊತೆಜೊತೆಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ರಾಜಕೀಯಕ್ಕೆ ಬಂದವನು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನರ ಮಧ್ಯೆಯೇ ಇದ್ದೇನೆ. ಹಾಗಾಗಿ, ಇಂದು ಒಂದು ಸ್ಥಾನಕ್ಕಾಗಿ ನಾನು ಹಾತೊರೆಯುವ ಅಗತ್ಯವಿಲ್ಲ’ ಎಂದರು.
*ಅಪಮಾನದ ಪ್ರಶ್ನೆಯೇ ಇಲ್ಲ:*
ರಾಜ್ಯಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ದೇವೇಗೌಡರಿಗೆ ಅಪಮಾನ ಮಾಡಲಾಗಿದೆ ಎಂಬ ಅವರ ಹಿತೈಷಿಗಳ ಹಾಗೂ ಬೆಂಬಲಿಗರ ಮಾತಿಗೆ ಪ್ರತಿಕ್ರಿಯಿಸಿದ ಅವರು, “ನನ್ನ ಸ್ನೇಹಿತರು ನನ್ನ ಬಗ್ಗೆ ಕಾಳಜಿಯಿಂದ ಮಾತನಾಡುತ್ತಿದ್ದಾರೆ. ಬಹಳ ಅಪಮಾನವಾಯಿತು ಎಂದು ನೋವು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನನ್ನ ಹೆಸರು ಪರಿಗಣನೆಗೆ ಬರುತ್ತದೆ ಎಂದು ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು ಬಿಟ್ಟರೆ, ನಾನು ಆ ಬಗ್ಗೆ ಎಲ್ಲಿಯೂ ಬೇಡಿಕೆ ಇಟ್ಟಿರಲಿಲ್ಲ. ಕಳೆದ ತಿಂಗಳು 26ರಂದು ಪ್ರಧಾನಿ ಮೋದಿ ಅವರ ಪುಸ್ತಕ ಬಿಡುಗಡೆಗಾಗಿ ದೆಹಲಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಯಾವುದೇ ರಾಜಕೀಯ ನಾಯಕರನ್ನು ಭೇಟಿ ಮಾಡದೆ ನೇರವಾಗಿ ಬೆಂಗಳೂರಿಗೆ ಮರಳಿದ್ದೇನೆ. ನನಗೆ ಸ್ಥಾನದ ಮೇಲೆ ಆಸೆ ಇದ್ದಿದ್ದರೆ ನಾನು ಅಂದೇ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದೆ” ಎಂದು ಸ್ಪಷ್ಟಪಡಿಸಿದರು.
*ಮೋದಿ ಮತ್ತು ನನ್ನ ನಡುವಿನ ಸಂಬಂಧ:*
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ ದೇವೇಗೌಡರು, ‘ಗುಜರಾತ್ ಗಲಭೆಯ ಸಂದರ್ಭದಲ್ಲಿ ನಾನು ಮೋದಿ ಅವರ ವಿರುದ್ಧ ಕಠಿಣ ಪದಗಳನ್ನು ಬಳಸಿದ್ದೆ. ಆದರೆ ಅವರು ಪ್ರಧಾನಿಯಾದ ನಂತರ ನಾನು ಅವರನ್ನು ಭೇಟಿ ಮಾಡಿದೆ. ಕಳೆದ 10 ವರ್ಷಗಳಲ್ಲಿ ಮೋದಿ ಅವರ ಆಡಳಿತದ ಬಗ್ಗೆ ಮೆಚ್ಚುಗೆ ಇದ್ದಾಗ ಹೊಗಳಿದ್ದೇನೆ, ತಪ್ಪು ಕಂಡಾಗ ನೇರವಾಗಿ ಮುಖದ ಮೇಲೆ ಹೇಳಿದ್ದೇನೆ. ಇಂದು ಜಗತ್ತಿನಾದ್ಯಂತ ಮೋದಿ ಅವರಿಗೆ ಗೌರವವಿದೆ. ಅದನ್ನು ನಾವು ಒಪ್ಪಿಕೊಳ್ಳಲೇಬೇಕು’ ಎಂದರು.
*ಮೈತ್ರಿ ಮುಂದುವರಿಯಲಿದೆ:*
‘ನಮ್ಮ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ. ರಾಜ್ಯದ ಹಿತದೃಷ್ಟಿಯಿಂದ ನಮ್ಮ ಸಂಬಂಧ ಗಟ್ಟಿಯಾಗಿದೆ. ಮುಂದೆಯೂ ಕೂಡ ರಾಜ್ಯದ ಜ್ವಲಂತ ಸಮಸ್ಯೆಗಳ ವಿಚಾರದಲ್ಲಿ ನಾವು ಮೋದಿಯವರನ್ನು ಭೇಟಿ ಮಾಡುತ್ತೇವೆ. ಕುಮಾರಸ್ವಾಮಿ ಅವರು ಮೋದಿ ಅವರ ಸಂಪುಟದಲ್ಲಿ ಮುಂದುವರಿಯಲಿದ್ದಾರೆ. ವೈಯಕ್ತಿಕವಾಗಿ ಮತ್ತು ಪಕ್ಷದ ಪರವಾಗಿ ನಮ್ಮ ಸಂಬಂಧ ಹೀಗೆಯೇ ಮುಂದುವರಿಯಲಿದೆ’ ಎಂದು ದೇವೇಗೌಡರು ಭವಿಷ್ಯದ ರಾಜಕೀಯ ನಡೆಯನ್ನು ಸ್ಪಷ್ಟಪಡಿಸಿದರು.












