ಇತ್ತೀಚಿನ ಸುದ್ದಿ
ದಾವಣಗೆರೆ ದಕ್ಷಿಣ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ಜಟಾಪಟಿ
09/04/2026, 18:37
ದಾವಣಗೆರೆ(reporterkarnataka.com): ಮತದಾರರ ಚೀಟಿ ನೀಡಲು ಮತಗಟ್ಟೆ ಸಮೀಪ ಹಾಕಿಕೊಂಡಿದ್ದ ಟೇಬಲ್ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕಾರ್ಯಕರ್ತರ ನಡುವೆ ಗುರುವಾರ ಇಲ್ಲಿ ಗಲಾಟೆ ನಡೆಯಿತು.
ನಗರದ ವಾರ್ಡ್ ಸಂಖ್ಯೆ 4 ರ ಮಿಲ್ಲತ್ ಶಿಕ್ಷಣ ಸಂಸ್ಥೆಯಲ್ಲಿ ಆರು ಮತಗಟ್ಟೆ ಇರುವುದರಿಂದ ಮೆಹಬೂಬ್ ನಗರದ ಮುಖ್ಯ ರಸ್ತೆಯ ಆಲಾ ಹಜರತ್ ಚೌಕದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಮತದಾರರ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದರು. ರಸ್ತೆಯ ಎರಡು ಬದಿಯಲ್ಲಿ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಕಾರ್ಯಕರ್ತರು ಟೇಬಲ್ ಹಾಕಿಕೊಂಡಿದ್ದರು. ಇದರಿಂದ ಸ್ಥಳದಲ್ಲಿ ಜನಜಂಗುಳಿ ಉಂಟಾಗಿತ್ತು.
ಕಾಂಗ್ರೆಸ್ ಹಾಗೂ ಎಸ್ಡಿಪಿಐ ಕಾರ್ಯಕರ್ತರು ಮತದಾರರ ಮನವೊಲಿಸಲು ಕೊನೆಯ ಗಳಿಗೆಯಲ್ಲಿ ಪ್ರಯತ್ನ ಮಾಡುತ್ತಿದರು. ಕುಕ್ಕರ್ ಚಿಹ್ನೆ ಹಾಗೂ 4ನೇ ಸಂಖ್ಯೆಗೆ ಮತ ಹಾಕುವಂತೆ ಎಸ್ಡಿಪಿಐ ಕಾರ್ಯಕರ್ತರು ಮನವಿ ಮಾಡುತ್ತಿದ್ದರು. ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು 3ನೇ ಸಂಖ್ಯೆಯ ಹಸ್ತದ ಗುರುತಿಗೆ ಮತ ನೀಡುವಂತೆ ಕೋರಿಕೊಳ್ಳುತ್ತಿದ್ದರು.
ಮುಖ್ಯ ರಸ್ತೆಯಿಂದ ಹಿಂದಕ್ಕೆ ಟೇಬಲ್ ಹಾಕಿಕೊಳ್ಳುವಂತೆ ಕಾಂಗ್ರೆಸ್ ನಾಯಕರು ಎಸ್ಡಿಪಿಐ ಮುಖಂಡರಿಗೆ ತಾಕೀತು ಮಾಡಿದರು. ಟೇಬಲ್ ತೆರವುಗೊಳಿಸುವಂತೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಹಾಗೂ ಇತರರು ಒತ್ತಾಯಿಸಿದರು. ಇದಕ್ಕೆ ಒಪ್ಪದೇ ಇದ್ದಾಗ ಕಾಂಗ್ರೆಸ್ ಮುಖಂಡರು ಟೇಬಲ್ ಎತ್ತಿ ಬಿಸಾಡಿದರು. ಆಗ ಎರಡು ಪಕ್ಷಗಳ ಮುಖಂಡರ ನಡುವೆ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಜನರನ್ನು ಚದುರಿಸಿದರು.













