ಇತ್ತೀಚಿನ ಸುದ್ದಿ
ದಕ್ಷಿಣ ಕನ್ನಡ | ತಾಯಿ-ಮಗು ಮರಣ ಶೂನ್ಯ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಸಂದ ಗೌರವ: ಉಸ್ತುವಾರಿ ಸಚಿವ ಯು.ಟಿ. ಖಾದರ್
07/11/2026, 18:57
*ಲೇಡಿಗೋಷನ್ಗೆ ಎನ್ಎಸ್ಟಿ ಯಂತ್ರ ಹಸ್ತಾಂತರ*
ಮಂಗಳೂರು(reporterkarnataka.com): ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಲೇಡಿಗೋಶನ್ ಆಸ್ಪತ್ರೆಗೆ ರಾಜ್ಯ ಪ್ರಶಸ್ತಿ ದೊರೆತಿರುವುದು ಸಂತಸದ ವಿಚಾರವಾಗಿದೆ. ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ಲೇಡಿಗೋಷನ್ ಆಸ್ಪತ್ರೆಯ ಸಾಧನೆ ಇಡೀ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ದೊರೆತ ಗೌರವ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಯುವವಾಹಿನಿ ಕೇಂದ್ರ ಮಂಗಳೂರು ಹಾಗೂ ವೇಣೂರು ಘಟಕದ ವತಿಯಿಂದ ನಗರದ ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಎನ್.ಎಸ್.ಟಿ ಯಂತ್ರ ಹಸ್ತಾಂತರ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಇಂತಹ ಗರ್ಭಸ್ಥ ಶಿಶು ಮತ್ತು ಗರ್ಭಿಣಿಯರ ಸ್ವಸ್ಥತೆಯನ್ನು ಪರೀಕ್ಷಿಸುವ ಸಾಧನ ಅಗತ್ಯವಾಗಿದ್ದು, ಗರ್ಭಾವಸ್ಥೆಯಿಂದಲೇ ತಾಯಿ ಮತ್ತು ಮಗುವಿನ ಆರೋಗ್ಯ ತಪಾಸಣೆಗೆ ಹಾಗೂ ಆರೋಗ್ಯ ರಕ್ಷಣೆಗೆ ಮತ್ತಷ್ಟು ಪೂರಕವಾಗಲಿದೆ ಎಂದು ಅವರು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ಸೇವೆಗೆ ನೆರವಾಗುವ ನಿಟ್ಟಿನಲ್ಲಿ ಎನ್.ಎಸ್.ಟಿ ಯಂತ್ರವನ್ನು ಕೊಡುಗೆಯಾಗಿ ನೀಡಿರುವ ಯುವವಾಹಿನಿ ಸಂಘಟನೆಯ ಸಮಾಜಮುಖಿ ಚಿಂತನೆ ಶ್ಲಾಘನೀಯ. ಇಂತಹ ಕೊಡುಗೆಗಳು ಕೇವಲ ಆಸ್ಪತ್ರೆಯ ವೈದ್ಯಕೀಯ ಸೇವೆಗೆ ನೆರವಾಗುವುದಷ್ಟೇ ಅಲ್ಲದೆ, ಇತರ ಯುವಕರಿಗೆ ಹಾಗೂ ಯುವ ಸಂಘಟನೆಗಳಿಗೆ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪ್ರೋತ್ಸಾಹ ಮತ್ತು ಪ್ರೇರಣೆಯಾಗಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ‘ಮದರ್ ಅಂಡ್ ಚೈಲ್ಡ್ ಕೇರ್ ಐಸಿಯು’ ಪ್ರಾರಂಭಿಸುವ ಯೋಜನೆಯಿದೆ. ಇದಲ್ಲದೆ, ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೇಂದ್ರವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗುವುದು. ಇದು ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶವಿದೆ. ಸಂತಾನ ಅಪೇಕ್ಷಿಸುವ ಅನೇಕ ದಂಪತಿಗಳಿಗೆ ಐವಿಎಫ್ ಚಿಕಿತ್ಸೆಯ ಅಗತ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಎಲ್ಲ ಕುಟುಂಬಗಳಿಗೂ ಸಾಧ್ಯವಾಗುವುದಿಲ್ಲ. ಅಂತಹ ಕುಟುಂಬಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಗುಣಮಟ್ಟದ ಚಿಕಿತ್ಸೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇಂತಹ ಯೋಜನೆಗಳ ಪ್ರಯೋಜನಗಳು ಕೇವಲ ಅನುಕೂಲಸ್ಥರಿಗೆ ಮಾತ್ರ ಸೀಮಿತವಾಗದೆ, ಬಡವರು ಹಾಗೂ ಜನಸಾಮಾನ್ಯರಿಗೂ ತಲುಪುವಂತಾಗಬೇಕು ಎಂದು ಅವರು ತಿಳಿಸಿದರು.
ಲೇಡಿಗೋಶನ್ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಬೆಳ್ತಂಗಡಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ಕೆ.ಎಂ.ಸಿ ಡೀನ್ ಡಾ.ಉನ್ನಿಕೃಷ್ಣನ್, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮತ್ತಿತ್ತರರು ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ನಿತೀಶ್ ಸ್ವಾಗತಿಸಿದರು.












