ಇತ್ತೀಚಿನ ಸುದ್ದಿ
Bangalore | ಹಾಕಿ ದಿಗ್ಗಜ ಕೊಡಗಿನ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ ಪದಕ ಕಳವು
05/11/2026, 19:19
ಬೆಂಗಳೂರು(reporterkarnataka.com):ಇಂದಿರಾನಗರದಲ್ಲಿರುವ, ಹಾಕಿ ದಂತಕಥೆ, ಕೊಡಗು ಜಿಲ್ಲೆಯ ಎಂ.ಎಂ.ಸೋಮಯ್ಯರವರ ಮನೆಯಲ್ಲಿ ಕಳ್ಳತನವಾಗಿದೆ. 1980ರ ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕ ಸೇರಿದಂತೆ ಹಲವಾರು ಐತಿಹಾಸಿಕ ಪದಕಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ. ಸಿ.ಸಿ.ಟಿ.ವಿ ದೃಶ್ಯಾವಳಿಗಳಲ್ಲಿ ಕಳ್ಳರು ಸೆರೆಯಾಗಿದೆ.
ಎಂ.ಎಂ. ಸೋಮಯ್ಯ ಅವರ ಮನೆಯ ಬೀಗ ಮುರಿದಿರುವ ದುಷ್ಕರ್ಮಿಗಳು, ಕೋಟ್ಯಂತರ ಅಭಿಮಾನಿಗಳ ಹೆಮ್ಮೆಯ ಸಂಕೇತವಾಗಿದ್ದ 1980ರ ಮಾಸ್ಕೋ ಒಲಿಂಪಿಕ್ಸ್ನ ಐತಿಹಾಸಿಕ ಚಿನ್ನದ ಪದಕ ಸೇರಿದಂತೆ ಹಲವು ಅಮೂಲ್ಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಎಂ.ಎಂ. ಸೋಮಯ್ಯ ಅವರು ತಮ್ಮ ಕುಟುಂಬದೊಂದಿಗೆ ಅಕ್ಟೋಬರ್ 25ರಿಂದ ಅಕ್ಟೋಬರ್ 28ರ ನಡುವೆ ಕೊಡಗಿನ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾಗ ಈ ಕಳವು ಆಗಿದೆ.
ಸೋಮಯ್ಯ ಅವರು ಅಕ್ಟೋಬರ್ 25ರಂದು ಸಂಜೆ ಸುಮಾರು 5 ಗಂಟೆಗೆ ನ್ಯೂ ತಿಪ್ಪಸಂದ್ರದಲ್ಲಿರುವ ತಮ್ಮ ನಿವಾಸಕ್ಕೆ ಬೀಗ ಹಾಕಿ ಕೊಡಗಿಗೆ ತೆರಳಿದ್ದರು. ಅಕ್ಟೋಬರ್ 28ರಂದು ಬೆಳಿಗ್ಗೆ 7.15ರ ಸುಮಾರಿಗೆ ವಾಪಸ್ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ದುಷ್ಕರ್ಮಿಗಳು ಸೋಮಯ್ಯ ಅವರ ಭಾರತೀಯ ಹಾಕಿ ಜೀವನದ ಸ್ಮರಣೀಯ ಸಾಧನೆಗಳಾಗಿದ್ದ ಅತ್ಯಮೂಲ್ಯ ಅಂತರರಾಷ್ಟ್ರೀಯ ಪದಕಗಳನ್ನು ಕದ್ದು ಒಯ್ದಿದ್ದಾರೆ. 1980 ಮಾಸ್ಕೋ ಒಲಿಂಪಿಕ್ಸ್ನಲ್ಲಿ ಭಾರತ ತಂಡ ಗೆದ್ದಿದ್ದ ಐತಿಹಾಸಿಕ ಚಿನ್ನದ ಪದಕ. 1982 ನವದೆಹಲಿ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ತಂಡ ಪ್ರತಿನಿಧಿಸಿ ಗೆದ್ದ ಬೆಳ್ಳಿ ಪದಕ. 1986 ಸಿಯೋಲ್ ಏಷ್ಯನ್ ಗೇಮ್ಸ್ನಲ್ಲಿ ಪಡೆದುಕೊಂಡಿದ್ದ ಕಂಚಿನ ಪದಕ. 1982 ಆಮ್ಸ್ಟರ್ಡ್ಯಾಮ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆದ್ದುಕೊಂಡಿದ್ದ ಕಂಚಿನ ಪದಕ ಕಳವು ಆಗಿದೆ.
*ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಸೆರೆ*:
ಪೊಲೀಸ್ ಎಫ್ಐಆರ್ ಹಾಗೂ ಪ್ರತ್ಯಕ್ಷದರ್ಶಿಗಳ ಮಾಹಿತಿಯ ಪ್ರಕಾರ,ಎಂ.ಎಂ. ಸೋಮಯ್ಯ ಅವರು ಕುಟುಂಬ ಸಮೇತ ಹೆಚ್ಎಎಲ್ 3ನೇ ಹಂತದಲ್ಲಿರುವ ತಮ್ಮ ನಿವಾಸಕ್ಕೆ ಬೀಗ ಹಾಕಿ ಕೊಡಗಿಗೆ ತೆರಳಿದ್ದರು. ಅಕ್ಟೋಬರ್ 28 ರಂದು ಬೆಳಿಗ್ಗೆ ಸುಮಾರು 7.15 ಕ್ಕೆ ಸೋಮಯ್ಯ ಅವರ ನೆರೆಯ ನಿವಾಸಿ ನಾರಾಯಣನ್ ಎಂಬುವರು ಮನೆಯ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ, ಕಳ್ಳತನವಾಗಿರುವ ಶಂಕೆ ವ್ಯಕ್ತಪಡಿಸಿ ಸೋಮಯ್ಯ ಅವರಿಗೆ ತಕ್ಷಣವೇ ಮಾಹಿತಿ ನೀಡಿದ್ದಾರೆ. ರೆಮನೆಯ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ, ಅಕ್ಟೋಬರ್ 28 ರಂದು ನಸುಕಿನ 2.34 ರ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಬಾಗಿಲು ಮುರಿದು ಒಳನುಗ್ಗಿರುವುದು ಪತ್ತೆಯಾಗಿದೆ. ಓರ್ವ ಆರೋಪಿ ನೀಲಿ ಶರ್ಟ್ ಹಾಗೂ ಮತ್ತೋರ್ವ ಕೆಂಪು ಶರ್ಟ್ ಧರಿಸಿರುವುದು ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಅಪರೂಪದ ಪದಕಗಳ ಜೊತೆಗೆ, ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಇತರ ವಸ್ತುಗಳನ್ನೂ ಎಗರಿಸಿದ್ದಾರೆ. 10 ಗ್ರಾಂ ತೂಕದ ಚಿನ್ನದ ಬಳೆ, 10 ಗ್ರಾಂ ತೂಕದ ಚಿನ್ನದ ಬಳೆ, 144 ಗ್ರಾಂ ತೂಕದ ಎರಡು ಬೆಳ್ಳಿಯ ಕಪ್ಗಳು ಹಾಗೂ 6 ಬೆಳ್ಳಿಯ ಚಮಚಗಳು, 80 ಗ್ರಾಂ ತೂಕದ ಬೆಳ್ಳಿಯ ಬಿಂದಿಗೆ/ಪಾತ್ರೆ, 30 ಸಾವಿರ ರೂ. ಕಳವು ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರನ್ನು ಬಂಧಿಸಲು ಎರಡು ಪ್ರತ್ಯೇಕ ವಿಶೇಷ ಪಡೆಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ, ಪದಕಗಳನ್ನು ವಶಪಡಿಸಿಕೊಳ್ಳಲಾಗುವುದು,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












