ಇತ್ತೀಚಿನ ಸುದ್ದಿ
ಮುಡಾ ಹೊಸವಲಯ ಕಟ್ಟಡ ನಿಯಮಾವಳಿ ಅವೈಜ್ಞಾನಿಕ; ತಿದ್ದುಪಡಿ ಅಗತ್ಯ: ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್
04/11/2026, 18:22
ಮಂಗಳೂರು(reporterkarnataka.com): ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ರೂಪಿಸಿರುವ ಸಮಗ್ರ ಅಭಿವೃದ್ಧಿ ಯೋಜನೆ (CDP) ಹಾಗೂ ಹೊಸವಲಯ ಕಟ್ಟಡ ನಿಯಮಾವಳಿಗಳಲ್ಲಿನ ಅವೈಜ್ಞಾನಿಕವಾಗಿದ್ದು, ತಕ್ಷಣ ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಅವೈಜ್ಞಾನಿಕ ನೀತಿಗಳಿಂದ ಜನಸಾಮಾನ್ಯರು ಮನೆ ನಿರ್ಮಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ULMS ಆನ್ಲೈನ್ ವ್ಯವಸ್ಥೆಯ ತಾಂತ್ರಿಕ ದೋಷಗಳಿಂದ ಕಟ್ಟಡ ಪರವಾನಗಿ ವಿಳಂಬವಾಗುತ್ತಿದೆ. ಸಣ್ಣ ಮನೆ ನಿರ್ಮಾಣಕ್ಕೆ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿದ್ದು, ದೊಡ್ಡ ಕಟ್ಟಡಗಳಿಗೆ ಆಫ್ಲೈನ್ ಮೂಲಕ ತ್ವರಿತ ಅನುಮತಿ ನೀಡುತ್ತಿರುವುದು ತಾರತಮ್ಯವಾಗಿದೆ ಎಂದು ಅವರು ದೂರಿದರು.
ಹೊಸವಲಯ ನಿಯಮದ ಟೆಲಿಸ್ಕೋಪಿಕ್ ಸೆಟ್ಬ್ಯಾಕ್ ವ್ಯವಸ್ಥೆಯಲ್ಲಿ ಏಳು ಅಂತಸ್ತಿನ ಕಟ್ಟಡಕ್ಕೆ ಒಂದು ಮೀಟರ್ ಹಾಗೂ ಎರಡು ಅಂತಸ್ತಿನ ಮನೆಗೆ 1.5 ಮೀಟರ್ ಸೆಟ್ಬ್ಯಾಕ್ ನಿಗದಿಪಡಿಸಿರುವುದು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಲ್ಲ. ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಈ ನಿಯಮವನ್ನು ರದ್ದುಗೊಳಿಸಬೇಕು ಎಂದರು.
ಹಿಂದೆ 6 ಮತ್ತು 7.5 ಮೀಟರ್ ರಸ್ತೆಗಳಿಗೆ ಜಾಗ ಬಿಟ್ಟುಕೊಟ್ಟವರಿಗೆ ನೀಡಲಾಗುತ್ತಿದ್ದ TDR ಹಾಗೂ ಪ್ರೀಮಿಯಂ FAR ಸೌಲಭ್ಯಗಳನ್ನು ಮರುಸ್ಥಾಪಿಸಬೇಕು. ಹೋಟೆಲ್, ವಸತಿಗೃಹ, ಶಾಲೆ ಸೇರಿದಂತೆ ವಿವಿಧ ಕಟ್ಟಡಗಳಿಗೆ 12 ಮೀಟರ್ ರಸ್ತೆ ಕಡ್ಡಾಯಗೊಳಿಸಿರುವ ನಿಯಮ ಮಂಗಳೂರಿನ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ಇದರಿಂದ ಧಾರ್ಮಿಕ ಕೇಂದ್ರಗಳು ಹಾಗೂ ಶಾಲೆಗಳ ಅಭಿವೃದ್ಧಿಗೂ ಅಡ್ಡಿಯಾಗಲಿದೆ ಎಂದು ಹೇಳಿದರು.
ಲೇಔಟ್ ಅನುಮೋದನೆಗೆ ವಿವಿಧ ಇಲಾಖೆಗಳ NOC ಪಡೆಯಲು ಎರಡು-ಮೂರು ವರ್ಷಗಳ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಯನ್ನು MUDA ಮೂಲಕವೇ ಸರಳಗೊಳಿಸಬೇಕು. ಮಂಗಳಾ ಕಾರ್ನಿಷ್ ರಸ್ತೆ ಸೇರಿದಂತೆ CDPಯಲ್ಲಿನ ಅವೈಜ್ಞಾನಿಕ ರಸ್ತೆ ಜೋಡಣೆ ಹಾಗೂ ಅಗಲೀಕರಣದಿಂದ ಜನವಸತಿ ಪ್ರದೇಶಗಳ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ಯೋಜನೆಗಳಲ್ಲಿನ ಬದಲಾವಣೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸುಮಾರು 20 ವರ್ಷಗಳಿಂದ ಸಮಗ್ರ CDP ಪರಿಷ್ಕರಣೆ ನಡೆದಿಲ್ಲ. ನಗರಾಭಿವೃದ್ಧಿಯ ಹೆಸರಿನಲ್ಲಿ ಜನರ ಮನೆ ನಿರ್ಮಾಣದ ಹಕ್ಕು, ಸುರಕ್ಷತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಬಾರದು. ಹೊಸವಲಯ ನಿಯಮಾವಳಿಗಳನ್ನು ಮರುಪರಿಶೀಲಿಸಿ ನ್ಯಾಯಯುತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂಜಿನಿಯರ್ ಸಂಘದ ಅಧ್ಯಕ್ಷ ಇಂಜಿನಿಯರ್ ಐ. ಯೋಗೀಶ್ ಪೈ ಉಪಸ್ಥಿತರಿದ್ದರು.












