ಇತ್ತೀಚಿನ ಸುದ್ದಿ
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಎಸ್‌ಐಟಿ ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ನೇಮಕ
30/10/2026, 20:36
ಬೆಂಗಳೂರು(reporterkarnataka.com): ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರ ಆಯ್ಕೆ ಬಗ್ಗೆ ಆಕ್ಷೇಪ ಎತ್ತಿದ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್‌ಐಟಿಯನ್ನು ಪುನರ್‌ರಚಿಸಿದ್ದು,ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.
ಎಸ್‌ಐಟಿ ಮುಖ್ಯಸ್ಥ ಎನ್. ಶಶಿಕುಮಾರ್ ಎಸ್ಐಟಿಯಿಂದ ಬಿಡುಗಡೆ ಕೋರಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ಚೇತನ್ ಸಿಂಗ್ ರಾಥೋಡ್ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಗೃಹ ಇಲಾಖೆ ನೂತನ ತಿದ್ದುಪಡಿ ಆದೇಶ ಹೊರಡಿಸಿದೆ. ಈ ಹಿಂದೆ ಸೆಪ್ಟೆಂಬರ್ 24ರಂದು ರಚನೆಯಾಗಿದ್ದ ಎಸ್‌ಐಟಿ ಆದೇಶ ಭಾಗದ ಕೋಷ್ಟಕದಲ್ಲಿದ್ದ ಇಬ್ಬರು ಅಧಿಕಾರಿಗಳನ್ನು ಕೈಬಿಡಲಾಗಿದೆ. ಕ್ರಮ ಸಂಖ್ಯೆ 1ರಲ್ಲಿದ್ದ ಮುಖ್ಯಸ್ಥ ಎನ್. ಶಶಿಕುಮಾರ್ ಅವರ ಬದಲಾಗಿ ಬೆಂಗಳೂರು ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ಮುಖ್ಯಸ್ಥರನ್ನಾಗಿ ಹಾಗೂ ಕ್ರಮ ಸಂಖ್ಯೆ 5ರಲ್ಲಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಎನ್. ವೆಂಕಟೇಶ್ ಪ್ರಸನ್ನ ಅವರ ಬದಲಾಗಿ ಹಾಸನ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀನಿಧಿ ಅವರನ್ನು ಎಸ್‌ಐಟಿ ಸದಸ್ಯರನ್ನಾಗಿ ನೇಮಿಸಲಾಗಿದೆ.












