1:59 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

8.24 ಲಕ್ಷ ಕೋಟಿಗೆ ಏರಿದ ರಾಜ್ಯದ ಸಾಲ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಕಳವಳ

06/03/2026, 17:22

*ಕಾಂಗ್ರೆಸ್ ಪಕ್ಷದ ಕ್ಯಾಬಿನೆಟ್, ಸ್ಟೇಟ್ ದರ್ಜೆ ಆಸಾಮಿಗಳ ಕಿಸೆಗೆ ಸಾಲದ ಹಣ ಹೋಗುತ್ತಿದೆ; ಹೆಚ್ಡಿಕೆ ಆರೋಪ*

*ಕಾಂಗ್ರೆಸ್ಸಿಗರಿಗೆ ಗಂಜಿ ಕೇಂದ್ರವಾದ ಸರಕಾರ; ಬಂಡವಾಳ ವೆಚ್ಚಕ್ಕೆ ಶೂನ್ಯ ಎಂದು ಕಿಡಿ*

*16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು 3.61%ರಿಂದ 4.7%ಗೆ ಏರಿಸಲಾಗಿದೆ*

ಬೆಂಗಳೂರು(reporterkarnatakaka.com): ರಾಜ್ಯ ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ಕಾಂಗ್ರೆಸ್ ನಾಯಕರನ್ನು ಸಾಕುತ್ತಿದೆ. ಸರಕಾರವು ಕಾಂಗ್ರೆಸ್ಸಿಗರಿಗೆ ಗಂಜಿ ಕೇಂದ್ರವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ರಾಜ್ಯದ್ದು ಈಗ ₹4.48 ಲಕ್ಷ ಕೋಟಿ ಗಾತ್ರದ ಬಜೆಟ್ ಆಗಿದ್ದು ರಾಜ್ಯದ ಈಗಿನ ಒಟ್ಟು ಸಾಲ ₹8.24 ಲಕ್ಷ ಕೋಟಿ ಆಗಿದೆ. ಈ ಸಾಲ ಕಳೆದ ವರ್ಷದಿಂದ ಈ ವರ್ಷಕ್ಕೆ ₹1.16 ಲಕ್ಷ ಕೋಟಿಯಿಂದ ₹1.32 ಲಕ್ಷ ಕೋಟಿಗೆ ಏರಿದೆ!! ಮುಂದಿನ ವರ್ಷಕ್ಕೆ ₹9 ಲಕ್ಷ ಕೋಟಿ ಮೀರುವುದು ಗ್ಯಾರಂಟಿ. ಈ ಸಾಲದ ಗ್ಯಾರಂಟಿ ಭೀತಿ ಹುಟ್ಟಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

*ಸಾಲದ ದುಡ್ಡು ಕಾಂಗ್ರೆಸ್ಸಿಗರ ಕಿಸೆಗೆ ಹೋಗಿ ಸೇರುತ್ತಿದೆ:*
ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಏನಕ್ಕೆ ಬಳಕೆ ಮಾಡುತ್ತಿದ್ದೀರಿ? ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ ಕಳೆದ ಮೂರು ವರ್ಷಗಳಿಂದ ಅಲ್ಲೇ ಇದೆ. ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಸಾಲದ ಮೇಲೆ ಸಾಲ ಮಾಡಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆ, ಸ್ಟೇಟ್ ಮಿನಿಸ್ಟರ್ ದರ್ಜೆ ದಯಪಾಲಿಸಿ ಪೊಗದಸ್ತಾಗಿ ಸಾಕುತ್ತಿದ್ದಾರೆ. ಅನುತ್ಪಾದಕ ವೆಚ್ಚಕ್ಕೆ ಹಣ ಪೋಲಾಗುತ್ತಿದ್ದು, ಈ ಸರಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆ. ಸಾಲದ ದುಡ್ಡು ಅವರ ಕಿಸೆಗೆ ಹೋಗಿ ಸೇರುತ್ತಿದೆ. ವೋಟು ಕೊಟ್ಟ ಮಹಾಪಾಪಕ್ಕೆ ಜನತೆಯನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ಧಾರುಣ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂಬರುವ ಸರಕಾರಗಳಿಗೆ ಕಾಂಗ್ರೆಸ್ ಸರಕಾರ ಸೃಷ್ಟಿಸುವ ಸಾಲ ಗುಂಡಿಯನ್ನು ಮುಚ್ಚುವುದೇ ಕೆಲಸ ಆಗಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

*ಸ್ಲೋಗನ್ ರಾಮಯ್ಯ ಎಂದು ಲೇವಡಿ:*
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಸ್ಲೋಗನ್ ರಾಮಯ್ಯ’ ಎಂದು ಮೂದಲಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಬಜೆಟ್ಟಿನ ಸುದೀರ್ಘ ಪ್ರಲಾಪ ಆಲಿಸಿದೆ. ಅವರಿಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ. ದಾಖಲೆ ಮಾಡಲು ಹೋಗಿ ರಾಜ್ಯದ ಆರ್ಥಿಕತೆಯನ್ನು ದಿಕ್ಕಾಪಾಲಾಗಿಸಿದ್ದಾರೆ ಸಿದ್ದರಾಮಯ್ಯನವರು ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ಆರ್ಥಿಕತೆ ಹಿಂಜರಿಕೆಯತ್ತ ಸಾಗಿದೆ. ಸಿಎಜಿ ವರದಿ, ರಿಸರ್ವ್ ಬ್ಯಾಂಕ್ ಕೊಟ್ಟಿರುವ ಎಚ್ಚರಿಕೆಗಿಂತ ದೊಡ್ಡ ಆರ್ಥಿಕ ಅಪಾಯಕ್ಕೆ ಸಿಲುಕಿದೆ ಕರ್ನಾಟಕ. ಮುಂದಿನ ದಿನಗಳು ಇನ್ನೂ ದುರ್ಬರವಾಗಿವೆ. ಕಾಂಗ್ರೆಸ್ ಸರಕಾರವನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

*ಕೇಂದ್ರ ನಿಂದನೆ ಸರಿಯಲ್ಲ:*
ಈ ಆಯವ್ಯಯ ಕರ್ಣಕಠೋರ ಮತ್ತು ರಾಜ್ಯಕ್ಕೆ ಭಾರ. ಏಕೆಂದರೆ, ಮುಖ್ಯಮಂತ್ರಿಗಳು ಕೇಂದ್ರದ ನಿಂದನೆಯನ್ನು ಈ ಬಾರಿಯೂ ಮುಂದುವರಿಸಿದರು, ಅದು ಅಗತ್ಯವಿರಲಿಲ್ಲ. ಒಕ್ಕೂಟ ವ್ಯವಸ್ಥೆಯ ಮೂಲತತ್ವವನ್ನೇ ಮರೆತು ತಮ್ಮ ಸರಕಾರದ ಕೆಟ್ಟ ಮಾದರಿಯನ್ನು ಪ್ರಚಾರ ಮಾಡಿಕೊಂಡು ಆತ್ಮರತಿ ಮೆರೆದಿದ್ದಾರೆ. 16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು 3.61%ರಿಂದ 4.7%ಗೆ ಏರಿಸಲಾಗಿದೆ. ಇದರಿಂದ ಅನಾಮತ್ತಾಗಿ ₹11,000 ಕೋಟಿಗೂ ಹೆಚ್ಚು ಹಣ ರಾಜ್ಯಕ್ಕೆ ಹರಿದುಬರುತ್ತದೆ. ಕೇಂದ್ರದಿಂದ ಹಣ ಬರುವುದು ಕಡಿಮೆ ಆಗಿಲ್ಲ ಎಂಬುದನ್ನು ಅವರ ಬಜೆಟ್ ಪುಸ್ತಕವೇ ಹೇಳುತ್ತದೆ! ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಾಯದ ಕೊರತೆ, ಸತತವಾಗಿ ಹೆಚ್ಚುತ್ತಿರುವ ಸಾಲದ ಪ್ರಮಾಣ ಕಳವಳಕಾರಿ. ಅನುದಾನ ಹಂಚಿಕೆಯಲ್ಲಿ ತಾಳಮೇಳವಿಲ್ಲ. ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್ ಪುಸ್ತಕವೇ ಸ್ಪಷ್ಟ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟು ಮಾಡಿದ್ದಾರೆ ಮುಖ್ಯಮಂತ್ರಿಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು