ಇತ್ತೀಚಿನ ಸುದ್ದಿ
ಡಿ.ಕೆ. ಶಿವಕುಮಾರ್ ಅವರೇ, ನಿಮಗೆ ಬೆಂಗಳೂರು ಹಬ್ಬಕ್ಕೆ ₹20 ಕೋಟಿ ಇದೆ, ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಕೊಡಲು ಹಣವಿಲ್ಲವೇ?: ಡಾ. ಮುಖ್ಯಮಂತ್ರಿ ಚಂದ್ರು
24/11/2026, 23:07
ಬೆಂಗಳೂರು(reporter Karnataka.com):ಆಶಾ ಕಾರ್ಯಕರ್ತೆಯರು ಕೇಳುತ್ತಿರುವುದು ಯಾವುದೇ ವಿಶೇಷ ಸೌಲಭ್ಯಗಳಲ್ಲ, ತಮ್ಮ ಹಕ್ಕು ಮತ್ತು ಶ್ರಮಕ್ಕೆ ತಕ್ಕ ಗೌರವಧನ ಮಾತ್ರ. ಹಗಲಿರುಳು ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಮಹಿಳೆಯರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರದ ಧೋರಣೆ ನಾಚಿಕೆಗೇಡಿನ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ, ಹೋರಾಟಕ್ಕೆ ಪಕ್ಷದ ಸಂಪೂರ್ಣ ಬೆಂಬಲ ಘೋಷಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಯೊಂದು ಬೇಡಿಕೆಗೂ ಸರ್ಕಾರದ ಬಳಿ ‘ಹಣವಿಲ್ಲ, ಆಗುವುದಿಲ್ಲ’ ಎಂಬ ಉತ್ತರವೇ ಸಿಗುತ್ತಿದೆ. ಬೆಂಗಳೂರು ಹಬ್ಬಕ್ಕೆ ₹20 ಕೋಟಿ ಖರ್ಚು ಮಾಡಲು, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ, ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಹುದ್ದೆ ನೀಡಲು ಹಣವಿದೆ. ಆದರೆ ದುಡಿಯುವ ಮಹಿಳೆಯರಿಗೆ ನ್ಯಾಯಯುತ ಗೌರವಧನ ನೀಡಲು ಮಾತ್ರ ಹಣವಿಲ್ಲವೇ? ನೀವು ಬಂಡೆಯಲ್ಲ, ಮಾನವೀಯತೆಯೇ ಸತ್ತುಹೋದ ಕಲ್ಲುಬಂಡೆ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಆರೋಗ್ಯ ಇಲಾಖೆಗೆ ₹17,500 ಕೋಟಿ ಅನುದಾನವಿರುವಾಗ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಅಗತ್ಯವಿರುವ ₹4,000 ಕೋಟಿ ಒದಗಿಸಲು ಸಾಧ್ಯವಿಲ್ಲವೇ? ನೆರೆಯ ಕೇರಳದಲ್ಲಿ ತಮ್ಮದೇ ಪಕ್ಷದ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ₹12,000 ನೀಡುತ್ತಿರುವುದು ರಾಜ್ಯ ಸರ್ಕಾರಕ್ಕೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ರೀತಿಯ ಪ್ರತಿಭಟನೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ₹10,000 ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಂದು ಅದೇ ಭರವಸೆಯ ಬಗ್ಗೆ ಮೌನ ವಹಿಸಿರುವುದೇಕೆ? ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಮಧ್ಯಪ್ರವೇಶಿಸಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುವುದಿಲ್ಲ, ಕಾಂಗ್ರೆಸ್ ಪಕ್ಷವನ್ನು ಸೋಲಿಸಿಯೇ ತೀರುತ್ತೇನೆ ಎಂದು ಹೇಳುವ ಧೈರ್ಯ ಸಿದ್ದರಾಮಯ್ಯನವರಿಗೆ ಇದೆಯೇ ಎಂದು ಸವಾಲು ಹಾಕಿದರು.
ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ನಿರ್ಧಾರಕ್ಕೆ ಆಶಾ ಕಾರ್ಯಕರ್ತೆಯರು ಬಂದರೆ ಸರ್ಕಾರದ ರಾಜಕೀಯ ಭವಿಷ್ಯ ಏನಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಮಹಿಳೆಯರ ಕನಿಷ್ಠ ಹಕ್ಕು, ಗೌರವ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲೂ ವಿಫಲವಾಗಿರುವ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುವ ಅಗತ್ಯವಿದೆ. ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಈಡೇರುವವರೆಗೂ ಆಮ್ ಆದ್ಮಿ ಪಕ್ಷ ಅವರೊಂದಿಗೆ ನಿರಂತರವಾಗಿ ನಿಲ್ಲಲಿದೆ ಎಂದು ಡಾ. ಮುಖ್ಯಮಂತ್ರಿ ಚಂದ್ರು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಡಾ. ಸತೀಶ್ ಕುಮಾರ್, ಶಶಿಧರ್ ಆರಾಧ್ಯ, ಉಷಾ ಮೋಹನ್, ಜಗದೀಶ್ ಚಂದ್ರ, ಪುಟ್ಟಣ್ಣಗೌಡ, ಪುಷ್ಪ ಕೇಶವ್, ಆಯುಬ್ ಖಾನ್ ಸೇರಿದಂತೆ ಪಕ್ಷದ ಹಲವು ಮುಖಂಡರು ಭಾಗವಹಿಸಿದ್ದರು.












