ಇತ್ತೀಚಿನ ಸುದ್ದಿ
ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ ಚಿನ್ನಾಭರಣ ಕಳವು
01/05/2026, 15:08
ಬೆಳಗಾವಿ(reporterkarnataka.com): ಮಗಳನ್ನ ಮದುವೆ ಮಾಡಿ ಕೊಟ್ಟ ಅತ್ತೆಯೇ ಅಳಿಯನ ಮನೆಗೆ ಕನ್ನ ಹಾಕಿರೋ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಅತ್ತೆ ಪೊಲೀಸ್ ಅತಿಥಿಯಾಗಿದ್ದಾಳೆ. ಮಗಳು-ಅಳಿಯ ಮದುವೆಗೆ ಹೋಗ್ತಿದ್ದಂತೆ ಮನೆಯನ್ನ ದೋಚಿದ ಅತ್ತೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಏನೇನು ಕದ್ದಳು ಈ ಚಾಲಾಕಿ ಅತ್ತೆ?
*ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆ:*
ಮಗಳನ್ನು ಮದುವೆ ಮಾಡಿಕೊಟ್ಟ ಮನೆ ಚೆನ್ನಾಗಿರಲಿ, ಅವಳು ಚೆನ್ನಾಗಿ ಬದುಕಲಿ ಅಂತ ಪೋಷಕರು ಇಚ್ಚಿಸ್ತಾರೆ. ಮಗಳು-ಅಳಿಯನ ಮನೆಯಲ್ಲಿ ಹಣ-ಕಾಸು ಚೆನ್ನಾಗಿದ್ರೆ ನೋಡಿ ಖುಷಿ ಪಡ್ತಾರೆ. ಆದ್ರೆ ಇಲ್ಲೊಬ್ಬ ಮಹಾತಾಯಿ ಮಗಳ ಮನೆಗೆ ಕನ್ನ ಹಾಕಿ ಹಣ ಹಾಗೂ ಚಿನ್ನಾಭರಣಗಳನ್ನ ದೋಚಿದ್ದಾಳೆ.
*ಮದುವೆಗೆಂದು ಹೋಗಿದ್ದ ದಂಪತಿ:*
ಅತ್ತೆಗೆ ಮನೆಯಲ್ಲೇ ಇರುವಂತೆ ಹೇಳಿ ದಂಪತಿ ಸ್ನೇಹಿತರ ಮದುವೆಗೆಂದು ಹೋಗಿದ್ರು. ಆದ್ರೆ ಮನೆಯಲ್ಲಿ ಯಾರೂ ಇಲ್ಲದಿರೋ ಸಮಯಕ್ಕಾಗಿ ಕಾಯ್ತಿದ್ದ ಉಜ್ವಲಾ ಕಮ್ಮಾರ ಅಳಿಯ ಮನೆಯನ್ನು ಇಂಚಿಂಚು ಶೋಧ ಮಾಡಿ ಸಿಕ್ಕ ಸಿಕ್ಕಿದ್ದನ್ನ ದೋಚಿದ್ದಾಳೆ. ಈಕೆಗೆ ಶಿವಾ ಅಪ್ಪಯ ಕೂಡ ಸಾಥ್ ನೀಡಿದ್ದಾರೆ.
*110 ಗ್ರಾಂ ಚಿನ್ನಾಭರಣ ಕದ್ದ ಅತ್ತೆ:*
ಮನೆಯ ಬೀರುವಿನಲ್ಲಿ ಇಟ್ಟಿದ್ದ ಪುತ್ರಿಯ ಚಿನ್ನದ ಬಳೆ, ಉಂಗುರ, ನೆಕ್ಲೇಸ್ ಸೇರಿದಂತೆ 16.57 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣವನ್ನ ಉಜ್ವಲಾ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮದುವೆ ಮುಗಿಸಿ ಮನೆಗೆ ಬಂದು ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ.
*ಪೊಲೀಸರ ಡ್ರಿಲ್ಗೆ ಸತ್ಯ ಬಾಯ್ಬಿಟ್ಟ ಕಳ್ಳಿ ಅತ್ತೆ:*
ಕಳ್ಳತನ ಸಂಬಂಧ ಟಿಳಕವಾಡಿ ಠಾಣೆ ಪೊಲೀಸರಿಗೆ ಅಳಿಯನ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆಗೆ ಶುರು ಮಾಡಿದ ಪೊಲೀಸರಿಗೆ ಅತ್ತೆಯ ಮೇಲೆ ಡೌಟ್ ಹೆಚ್ಚಿದೆ. ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪೊಲೀಸರ ಡ್ರಿಲ್ ಬಳಿ ತಾನೇ ಕಳ್ಳತನ ಮಾಡಿರುವುದಾಗಿ ಈ ಕಳ್ಳಿ ಅತ್ತೆ ಬಾಯಿಬಿಟ್ಟಿದ್ದಾರೆ. ಪಿರನವಾಡಿ ನಿವಾಸಿ ಉಜ್ವಲಾ ಕಮ್ಮಾರ, ಶಿವಾ ಅಪ್ಪಯನವರ ಇಬ್ಬರನ್ನ ಬಂಧಿಸಿದ ಪೊಲೀಸರು ಚಿನ್ನಾಭರಣವನ್ನ ವಶಪಡಿಸಿಕೊಂಡಿದ್ದಾರೆ.
*ಈ ಅತ್ತೆ ಹಣ ಕದ್ದಿದ್ದು ಯಾಕೆ ಗೊತ್ತಾ?:*
ಪಿರನವಾಡಿ ನಿವಾಸಿ ಉಜ್ವಲಾ ಕಮ್ಮಾರ ಅವರು ತನ್ನ ಅಳಿಯನ ಮನೆಯಲ್ಲೇ ಕಳ್ಳತನ ಮಾಡೋಕೆ ಒಂದು ಕಾರಣ ಇದೆ. ಪುತ್ರಿಯರ ಮದುವೆ ಸಾಲ ತೀರಿಸಲು ಈಕೆ ಹಿರಿಯ ಅಳಿಯನ ಮನೆಯಲ್ಲೇ ಕಳ್ಳತನ ಮಾಡಿದ್ದಾರೆ ಎನ್ನುವ ವಿಚಾರ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸಾಲ ತೀರಿಸಲು ಆಗದ ಸಂಕಷ್ಟ ಸ್ಥಿತಿಗೆ ತಲುಪಿ ಈ ತಾಯಿ ಮಗಳ ಮನೆಯಲ್ಲೇ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.












