ಇತ್ತೀಚಿನ ಸುದ್ದಿ
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಶೇ. 1.50ರಷ್ಟು ಹೆಚ್ಚಳ: ಸರ್ಕಾರದ ಆದೇಶ ಪ್ರಕಟ
11/05/2026, 18:05
ಬೆಂಗಳೂರು(reporterkarnataka.com): ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿದೆ. ಈ ಶೇ. 1.50 ರಷ್ಟು ಹೆಚ್ಚಳವು 2026ರ ಜನವರಿ 1 ರಿಂದ ಪೂರ್ವಾನ್ವಯ ಆಗಲಿದೆ. ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತ ವೇತನದಾರರಿಗೆ ಕರ್ನಾಟಕ ಸರ್ಕಾರವು ಒಂದು ಪ್ರಮುಖ ಸಿಹಿ ಸುದ್ದಿಯನ್ನು ನೀಡಿದೆ. ನೌಕರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿ ಆರ್ಥಿಕ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.
2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಈ ಹೆಚ್ಚಳ ಅನ್ವಯವಾಗಲಿದೆ. ಪ್ರಸ್ತುತ ಮೂಲ ವೇತನದ ಶೇಕಡಾ 14.25 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇಕಡಾ 15.75 ಕ್ಕೆ ಪರಿಷ್ಕರಿಸಲಾಗಿದೆ. ಅಂದರೆ ಒಟ್ಟು ಶೇ. 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳವಾದಂತಾಗಿದೆ.
ಈ ಆದೇಶವು ಕೇವಲ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ, ಇನ್ನುಳಿದ ಹಲವು ವರ್ಗದವರಿಗೂ ಅನ್ವಯವಾಗಲಿದೆ:
ರಾಜ್ಯ ಸರ್ಕಾರದ ನಿವೃತ್ತ ವೇತನದಾರರು ಮತ್ತು ಕುಟುಂಬ ನಿವೃತ್ತ ವೇತನದಾರರು.
*ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು:*
*ಯುಜಿಸಿ (UGC), ಎಐಸಿಟಿಇ (AICTE), ಐಸಿಎಆರ್ (ICAR) ವೇತನ ಶ್ರೇಣಿಯ ನಿವೃತ್ತ ನೌಕರರು.
*ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು.
*ಪೂರ್ಣಾವಧಿ ಕೆಲಸ ಮಾಡುವ ವರ್ಕ್‌ಚಾರ್ಜ್ ನೌಕರರು.
*ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಪೂರ್ಣಾವಧಿ ನೌಕರರು.
ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜನವರಿ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಸರ್ಕಾರಿ ಆದೇಶದ ಪ್ರಕಾರ, ಜನವರಿ 1ರಿಂದ ಏಪ್ರಿಲ್ ತಿಂಗಳವರೆಗಿನ ಬಾಕಿ ಮೊತ್ತವನ್ನು (Arrears) ಮೇ 2026 ರ ವೇತನದೊಂದಿಗೆ ನಗದಾಗಿ ಪಾವತಿಸಲಾಗುವುದು.
ತುಟ್ಟಿಭತ್ಯೆಯ ಲೆಕ್ಕಾಚಾರಕ್ಕಾಗಿ ‘ಮೂಲ ವೇತನ’ ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ. ಇದರಲ್ಲಿ ಸ್ಥಗಿತ ವೇತನ ಬಡ್ತಿ ಮತ್ತು ವೈಯಕ್ತಿಕ ವೇತನಗಳನ್ನು ಸೇರಿಸಿಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸಬೇಕು, ಇದನ್ನು ಯಾವುದೇ ಉದ್ದೇಶಕ್ಕಾಗಿ ವೇತನ ಎಂದು ಪರಿಗಣಿಸಲಾಗುವುದಿಲ್ಲ.
ಹಣ ಪಾವತಿಯಲ್ಲಿ 50 ಪೈಸೆಗಿಂತ ಹೆಚ್ಚಿನ ಭಿನ್ನಾಂಕವಿದ್ದರೆ ಅದನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸಬೇಕು ಮತ್ತು 50 ಪೈಸೆಗಿಂತ ಕಡಿಮೆ ಇದ್ದರೆ ಅದನ್ನು ನಿರ್ಲಕ್ಷಿಸಬೇಕು.
ಈ ನಿರ್ಧಾರದಿಂದಾಗಿ ಲಕ್ಷಾಂತರ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕ ಅನುಕೂಲವಾಗಲಿದ್ದು, ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಇದು ಸಹಕಾರಿಯಾಗಲಿದೆ.













