ಇತ್ತೀಚಿನ ಸುದ್ದಿ
ಸಿಂಧನೂರು ತಾಲೂಕಿನಲ್ಲಿ ಬರಪೀಡಿತ ಜಮೀನುಗಳಿಗೆ ಡಿಸಿಎಂ ಡಾ. ಪರಮೇಶ್ವರ್ ಭೇಟಿ: ರೈತರೊಂದಿಗೆ ಸಂವಾದ
08/10/2026, 20:17
*ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳು ಬರಪೀಡಿತ*
*ನಮ್ಮ ಸರ್ಕಾರ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರ ಪರವಾಗಿದೆ*
*ಕುಡಿಯುವ ನೀರು ಮತ್ತು ಮೇವಿಗೆ ಆದ್ಯತೆ; ಅಗತ್ಯ ಅನುದಾನ ಬಿಡುಗಡೆ*
*ರೈತರಿಗೆ ಹಗಲು ಹೊತ್ತು ನಿರಂತರ ಆರು ಗಂಟೆ ವಿದ್ಯುತ್; ರೈತರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ*
ಸಿಂಧನೂರು(reporterkarnataka.com): ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನು ಉಳಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅಗತ್ಯವಿದ್ದರೆ ಸಾಲ ಮಾಡಿಯಾದರೂ ರೈತರಿಗೆ ನೆರವು ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ರೈತ ಮಹಿಳೆ ನಾಗಮ್ಮ ಶರಣೇಗೌಡ ಅವರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿದ ಬಳಿಕ ಅವರು ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ರಾಜ್ಯದ 240 ತಾಲೂಕುಗಳ ಪೈಕಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇನ್ನೂ ಸುಮಾರು 10 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಕರಾವಳಿ ಭಾಗದ ನಾಲ್ಕೈದು ತಾಲೂಕುಗಳನ್ನು ಹೊರತುಪಡಿಸಿದರೆ ಬಹುತೇಕ ಇಡೀ ರಾಜ್ಯ ಬರಗಾಲದ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.
ನಾನು ಸಾರ್ವಜನಿಕ ಜೀವನಕ್ಕೆ ಬಂದು 40 ವರ್ಷಗಳಾಗಿದ್ದು, ಇಂತಹ ಭೀಕರ ಬರಗಾಲವನ್ನು ಕಂಡಿಲ್ಲ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಸುಮಾರು 125 ವರ್ಷಗಳ ಹಿಂದೆ ಇಂತಹ ಬರಗಾಲ ಸಂಭವಿಸಿತ್ತು ಎನ್ನಲಾಗುತ್ತಿದೆ. ಕಳೆದ 75 ವರ್ಷಗಳಲ್ಲಿಯೂ ಮಳೆ ಈ ಪ್ರಮಾಣದಲ್ಲಿ ಕೈಕೊಟ್ಟಿರುವ ಪರಿಸ್ಥಿತಿ ಕಂಡುಬಂದಿಲ್ಲ ಎಂದು ತಿಳಿಸಿದರು.
ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಜಮೀನಿನ ಮಣ್ಣನ್ನು ಕೈಯಲ್ಲಿ ಹಿಡಿದು ನೋಡಿದರೆ ಸುಡುವಷ್ಟು ಬಿಸಿಯಾಗಿದೆ. ಇಂತಹ ಮಣ್ಣಿನಲ್ಲಿ ಬೆಳೆ ಬೆಳೆಯಲು ಸಾಧ್ಯವೇ ಇಲ್ಲ. ಮಳೆ ಕೊರತೆಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಒಂದು ವಾರದಿಂದ ಕೆಲವು ಪ್ರದೇಶಗಳಲ್ಲಿ ಮಳೆಯಾಗಿರುವುದರಿಂದ ಜಮೀನುಗಳಲ್ಲಿ ಸ್ವಲ್ಪ ಹಸಿರು ಕಾಣಿಸುತ್ತಿದೆ. ಆದರೆ, ಅದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಸಾಮಾನ್ಯವಾಗಿ ಎತ್ತರಕ್ಕೆ ಬೆಳೆಯಬೇಕಾದ ತೊಗರಿ ಗಿಡಗಳು ಎರಡು ಅಡಿಗೆ ಸೀಮಿತವಾಗಿ ಒಣಗಿವೆ. ಬೆಳೆಗಳು ಕಾಳು ಕಟ್ಟದೆ ನಾಶವಾಗಿವೆ ಎಂದು ವಿವರಿಸಿದರು.
ನಿನ್ನೆ ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸುಮಾರು 10 ಕಡೆ ಬೆಳೆಗಳನ್ನು ಪರಿಶೀಲಿಸಿದ್ದೇನೆ. ಎಲ್ಲಿಯೂ ಸಮರ್ಪಕವಾಗಿ ಬೆಳೆ ಉಳಿದಿಲ್ಲ. ಕೆಲವು ಪ್ರದೇಶಗಳಲ್ಲಿ ಶೇ.98ರಷ್ಟು ಬೆಳೆ ನಾಶವಾಗಿದೆ. ಉಳಿದ ಬೆಳೆಯಿಂದಲೂ ರೈತರಿಗೆ ಆದಾಯ ಸಿಗುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ರೈತರು ಬ್ಯಾಂಕ್, ಸಹಕಾರಿ ಬ್ಯಾಂಕ್ ಹಾಗೂ ಖಾಸಗಿಯವರಿಂದ ಸಾಲ ಪಡೆದು ಬಿತ್ತನೆ ಮಾಡಿದ್ದಾರೆ. ಬೆಳೆ ಕೈಕೊಟ್ಟಿರುವುದರಿಂದ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಿದೆ. ಸಣ್ಣ ರೈತರಷ್ಟೇ ಅಲ್ಲದೆ, ಹೆಚ್ಚಿನ ಜಮೀನು ಹೊಂದಿರುವ ರೈತರೂ ನಷ್ಟ ಅನುಭವಿಸಿದ್ದಾರೆ. ಸಾಮಾನ್ಯವಾಗಿ ಇತರರಿಗೆ ನೆರವಾಗುವ ರೈತರೂ ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಡಿತರ ಅಂಗಡಿಗಳಿಂದ ದೊರೆಯುವ ಅಕ್ಕಿಯನ್ನು ಹೊರತುಪಡಿಸಿದರೆ ರೈತರ ಕೈಯಲ್ಲಿ ಏನೂ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರ ಪರವಾಗಿರುವ ಸರ್ಕಾರ. ಬರಗಾಲ ಬಂದಿರುವ ಕಾರಣಕ್ಕೆ ನಾವು ಈ ಮಾತನ್ನು ಹೇಳುತ್ತಿಲ್ಲ. ಮೊದಲಿನಿಂದಲೂ ಇದೇ ನಿಲುವನ್ನು ಹೊಂದಿದ್ದೇವೆ. ರೈತ ದೇಶಕ್ಕೆ ಅನ್ನ ನೀಡುವವನು. ರಾಜ್ಯದ ಆರ್ಥಿಕತೆಗೆ ಶಕ್ತಿ ತುಂಬುವವನು. ಅಂತಹ ರೈತ ಇಂದು ಸಂಕಷ್ಟದಲ್ಲಿರುವಾಗ ಆತನ ನೆರವಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಬರ ಪರಿಸ್ಥಿತಿಯ ಮುನ್ಸೂಚನೆ ದೊರೆತ ತಕ್ಷಣವೇ ಜೂನ್ ತಿಂಗಳಿನಲ್ಲಿ ಕಲಬುರಗಿಯಲ್ಲಿ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇವೆ. ನಂತರ ಬೆಳಗಾವಿ ಹಾಗೂ ಚಿತ್ರದುರ್ಗದಲ್ಲಿಯೂ ಸಭೆಗಳನ್ನು ನಡೆಸಿದ್ದೇವೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಲಾಗಿದೆ. ಕೋಲಾರ, ಚಿತ್ರದುರ್ಗ, ಬೆಳಗಾವಿ ಸೇರಿದಂತೆ ಹಲವು ಭಾಗಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ವಿಧಾನಮಂಡಲದ ಅಧಿವೇಶನದ ಕಾರಣದಿಂದ ಕೆಲವು ಪ್ರದೇಶಗಳಿಗೆ ಮೊದಲೇ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೂರು ದಿನಗಳ ಪ್ರವಾಸ ಹಮ್ಮಿಕೊಂಡು ರೈತರ ಸಮಸ್ಯೆಗಳನ್ನು ಖುದ್ದಾಗಿ ತಿಳಿದುಕೊಳ್ಳುತ್ತಿದ್ದೇನೆ. ಇತರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಇಂದು ರಾತ್ರಿ ಹಿಂದಿರುಗಬೇಕಾಗಿದ್ದು, ಮುಂದಿನ ದಿನಗಳಲ್ಲಿಯೂ ವಿವಿಧ ಜಿಲ್ಲೆಗಳು ಮತ್ತು ತಾಲೂಕುಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.
ಬರಗಾಲ ಎನ್ನುವುದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಎಂಬ ಭೇದವಿಲ್ಲದೆ ಎಲ್ಲ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬರ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವೆಂದು ಪ್ರತಿಪಾದಿಸಿದರು.
ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬರ ನಿರ್ವಹಣೆ ಕುರಿತು ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಆರಂಭದಲ್ಲಿ ಮೂರು ದಿನಗಳ ಅಧಿವೇಶನ ನಿಗದಿಪಡಿಸಲಾಗಿದ್ದು, ವಿರೋಧ ಪಕ್ಷಗಳ ಮನವಿಯ ಮೇರೆಗೆ ಮತ್ತೊಂದು ದಿನ ವಿಸ್ತರಿಸಿ ಒಟ್ಟು ನಾಲ್ಕು ದಿನ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿಗೂ ಬರ ನಿರ್ವಹಣೆಗೆ ಸಂಬಂಧಿಸಿದ ಸಲಹೆಗಳನ್ನು ನೀಡುವಂತೆ ಕೋರಿದ್ದೇವೆ. ಕೇಂದ್ರದಲ್ಲಿ ಒಂದು ಸರ್ಕಾರ, ರಾಜ್ಯದಲ್ಲಿ ಮತ್ತೊಂದು ಸರ್ಕಾರವಿದೆ. ಆದರೆ ರೈತರ ಸಂಕಷ್ಟ ನಿವಾರಣೆಗೆ ಎರಡೂ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದರೆ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ₹1,250 ಕೋಟಿ ಘೋಷಿಸಿದೆ. ರೈತರಿಗೆ ತಲಾ ₹2,500 ನೀಡುವ ನಿರ್ಧಾರವನ್ನು ನಾನೇ ಪ್ರಕಟಿಸಿದ್ದೇನೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ರೈತರಿಗೆ ₹8,500 ನೆರವು ಒದಗಿಸುವ ನಿಯಮವಿದೆ. ಆದರೆ ಕೇಂದ್ರ ಸರ್ಕಾರದಿಂದ ಈವರೆಗೆ ಒಂದು ಪೈಸೆಯೂ ಬಂದಿಲ್ಲ. ಮುಂದಿನ ದಿನಗಳಲ್ಲಿ ನೆರವು ಬರಬಹುದು. ಅಲ್ಲಿಯವರೆಗೆ ರೈತರನ್ನು ಕಾಯಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನಿಂದ ತಕ್ಷಣ ₹2,500 ನೆರವು ನೀಡಲು ನಿರ್ಧರಿಸಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಈಗಾಗಲೇ ಸುಮಾರು ₹52,000 ಕೋಟಿ ಮೊತ್ತದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಪ್ರಯೋಜನ ಕಾಂಗ್ರೆಸ್ ಪಕ್ಷದವರಿಗೆ ಮಾತ್ರವಲ್ಲ, ಅರ್ಹರಾಗಿರುವ ಎಲ್ಲರಿಗೂ ದೊರೆಯುತ್ತಿದೆ. ಮಹಿಳೆಯರಿಗೆ ಮಾಸಿಕ ₹2,000 ಆರ್ಥಿಕ ನೆರವು, ಉಚಿತ ಬಸ್ ಪ್ರಯಾಣ ಹಾಗೂ ಇತರ ಗ್ಯಾರಂಟಿ ಸೌಲಭ್ಯಗಳು ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆ ಎಂದು ವಿವರಿಸಿದರು.
ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ನೆರವುಗಳನ್ನು ಲೆಕ್ಕಹಾಕಿದರೆ ರೈತ ಕುಟುಂಬಕ್ಕೆ ಸುಮಾರು ₹1 ಲಕ್ಷ ಮೊತ್ತದ ಪ್ರಯೋಜನ ದೊರೆಯುತ್ತಿದೆ ಎಂದು ತಿಳಿಸಿದರು.
ಇದರ ಜೊತೆಗೆ ರೈತರ ವಿದ್ಯುತ್ ಸಬ್ಸಿಡಿಗಾಗಿ ಸರ್ಕಾರ ₹22,000 ಕೋಟಿ ವೆಚ್ಚ ಮಾಡುತ್ತಿದೆ. ರೈತರ ಪರವಾಗಿ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಸರ್ಕಾರವೇ ಹಣ ಪಾವತಿಸುತ್ತಿದೆ. ಇಷ್ಟೆಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವಾಗ ಸರ್ಕಾರ ದಿವಾಳಿಯಾಗಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.





ಸರ್ಕಾರಕ್ಕೆ ಆರ್ಥಿಕ ಇತಿಮಿತಿಗಳಿದ್ದರೂ ರೈತರ ನೆರವಿಗೆ ನಿಲ್ಲುವ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ. ರೈತರನ್ನು ಉಳಿಸಲು ಅಗತ್ಯವಿದ್ದರೆ ಸಾಲ ಮಾಡಿಯಾದರೂ ನೆರವು ನೀಡಬೇಕೆಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ್ದೇವೆ. ರೈತರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಬರಗಾಲದಿಂದ ಕೇವಲ ಬೆಳೆ ನಷ್ಟ ಮಾತ್ರ ಸಂಭವಿಸಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ತೀವ್ರವಾಗಿದೆ. ಜನರಿಗೆ ಕುಡಿಯುವ ನೀರು ಒದಗಿಸುವುದರ ಜೊತೆಗೆ ಹಸು, ಎತ್ತು, ಕುರಿ, ಮೇಕೆ ಸೇರಿದಂತೆ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಕೆಲವು ಪ್ರದೇಶಗಳಲ್ಲಿ ಅಣೆಕಟ್ಟೆಗಳ ಮೂಲಕ ಕುಡಿಯುವ ನೀರು ಲಭ್ಯವಾಗುತ್ತಿದ್ದರೂ, ರಾಜ್ಯದ ಅನೇಕ ಭಾಗಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಕೆಲವು ಪ್ರದೇಶಗಳಲ್ಲಿ 300ರಿಂದ 500 ಅಡಿ ಆಳದಲ್ಲಿ ನೀರು ದೊರೆಯುತ್ತಿದ್ದರೆ, ನಮ್ಮ ಭಾಗದಲ್ಲಿ 1,800 ಅಡಿ ಹಾಗೂ ಕೋಲಾರದಲ್ಲಿ 2,000 ಅಡಿ ಆಳಕ್ಕೆ ಕೊಳವೆಬಾವಿ ಕೊರೆದರೂ ಕೇವಲ ಒಂದೂವರೆ ಇಂಚಿನಷ್ಟು ನೀರು ದೊರೆಯುತ್ತಿದೆ. ಹೀಗಾಗಿ ನೀರಿನ ಸಮಸ್ಯೆ ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರವಾಗಿದೆ ಎಂದು ವಿವರಿಸಿದರು.
ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಬೆಳೆಸಲು ಅಗತ್ಯ ಕಿಟ್ಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೇವು ಬ್ಯಾಂಕ್ಗಳ ವ್ಯವಸ್ಥೆ ಹಾಗೂ ಮೇವು ಕಿಟ್ಗಳಿಗಾಗಿ ಜಿಲ್ಲಾಧಿಕಾರಿಗಳಿಗೆ ₹25 ಕೋಟಿ ಒದಗಿಸಲಾಗಿದೆ ಎಂದು ಹೇಳಿದರು.
ಕುಡಿಯುವ ನೀರಿನ ವ್ಯವಸ್ಥೆಗಾಗಿ ಈವರೆಗೆ ₹306 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ನೀಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ₹2 ಕೋಟಿ ಅನುದಾನವನ್ನೂ ಒದಗಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕವೂ ಈ ಭಾಗಕ್ಕೆ ಅನುದಾನ ಲಭ್ಯವಿದೆ. ಮಂಡಳಿಗೆ ₹35,000 ಕೋಟಿ ಅನುದಾನದ ಪ್ರಸ್ತಾಪವಿದ್ದು, ವರ್ಷಕ್ಕೆ ₹5,000 ಕೋಟಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಜನರ ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಕೊರತೆಯನ್ನು ಪರಿಹರಿಸಲು ಸರ್ಕಾರ ಜವಾಬ್ದಾರಿಯುತವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಬರ ಪರಿಸ್ಥಿತಿಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ಉದ್ಯೋಗ ಅರಸಿ ಗುಳೆ ಹೋಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನಿನ್ನೆ ಭೇಟಿ ನೀಡಿದ ಲಂಬಾಣಿ ತಾಂಡಾವೊಂದರಲ್ಲಿ ಬಹುತೇಕ ಜನರು ಉದ್ಯೋಗಕ್ಕಾಗಿ ಊರು ತೊರೆಯುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ಗ್ರಾಮಸ್ಥರಿಗೆ ಊರು ಬಿಟ್ಟು ಹೋಗದಂತೆ ಮನವಿ ಮಾಡಿದ್ದೇನೆ. ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಉದ್ಯೋಗ ಖಾತ್ರಿ ಕಾಮಗಾರಿಗಳ ಮೂಲಕ ದಿನಕ್ಕೆ ₹380 ಕೂಲಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ಕೆರೆ, ಕಟ್ಟೆ ಹಾಗೂ ಗ್ರಾಮೀಣ ಪ್ರದೇಶಗಳ ಇತರ ಅಭಿವೃದ್ಧಿ ಕಾಮಗಾರಿಗಳಲ್ಲಿ ಜನರಿಗೆ ಕೆಲಸ ನೀಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರತಿಯೊಬ್ಬ ಅರ್ಹ ಕಾರ್ಮಿಕನಿಗೂ ಕೆಲಸ ಒದಗಿಸುವಂತೆ ಸೂಚಿಸಲಾಗಿದೆ. ಕೂಲಿ ಹಣ ಪಾವತಿಸಲು ತಿಂಗಳುಗಟ್ಟಲೆ ವಿಳಂಬ ಮಾಡಬಾರದು. ವಾರಕ್ಕೊಮ್ಮೆ ಕೂಲಿ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬರದಿಂದ ಜನರು ಜೀವನೋಪಾಯ ಕಳೆದುಕೊಂಡು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.
*ಹಗಲಿನಲ್ಲಿ ವಿದ್ಯುತ್ ನೀಡಲು ಸೂಚನೆ:*
ಬರಪೀಡಿತ ಪ್ರದೇಶಗಳ ಪ್ರವಾಸದ ಸಂದರ್ಭದಲ್ಲಿ ರೈತರು ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂಬ ಅಹವಾಲು ಸಲ್ಲಿಸಿದ್ದಾರೆ. ಉಮರೋಟಿ ಗ್ರಾಮದಲ್ಲಿಯೂ ರೈತರು ವಿದ್ಯುತ್ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ಬಳಿಕ, ಕೃಷಿ ಚಟುವಟಿಕೆಗಳಿಗೆ ಆರು ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಸಾಧ್ಯವಾದಷ್ಟು ಹಗಲಿನ ವೇಳೆಯಲ್ಲಿಯೇ ವಿದ್ಯುತ್ ನೀಡಬೇಕು ಎಂದು ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ರಾತ್ರಿ ವೇಳೆ ಜಮೀನುಗಳಿಗೆ ತೆರಳುವ ರೈತರಿಗೆ ಹಾವು ಕಡಿತ ಸೇರಿದಂತೆ ಹಲವು ಅಪಾಯಗಳಿವೆ. ಹೀಗಾಗಿ ಹಗಲಿನಲ್ಲಿ ಸಮರ್ಪಕ ವೋಲ್ಟೇಜ್ನೊಂದಿಗೆ ಆರು ಗಂಟೆ ನಿರಂತರ ವಿದ್ಯುತ್ ನೀಡುವುದು ಅಗತ್ಯವಾಗಿದೆ. ವಿದ್ಯುತ್ ಸರಬರಾಜಿನಲ್ಲಿ ತಾಂತ್ರಿಕ ಸಮಸ್ಯೆಗಳಿದ್ದರೆ ಅವುಗಳನ್ನು ಸರಿಪಡಿಸಬೇಕು. ಅಗತ್ಯವಿದ್ದರೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳಿಂದ ಕೆಲವೊಮ್ಮೆ ತಪ್ಪುಗಳಾಗಬಹುದು. ಆದರೆ ಸಮಸ್ಯೆಗಳಿದ್ದಾಗ ಪರಸ್ಪರ ವಾಗ್ವಾದ ನಡೆಸುವುದರಿಂದ ಪರಿಹಾರ ದೊರೆಯುವುದಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ರೈತರ ಪರವಾಗಿ ನಾನೇ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.
ಹಗಲಿನಲ್ಲಿ ಆರು ಗಂಟೆ ನಿರಂತರ ವಿದ್ಯುತ್ ಪೂರೈಕೆಗೆ ನೀಡಿರುವ ಸೂಚನೆಗಳನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು. ಅನುಷ್ಠಾನದಲ್ಲಿ ತೊಂದರೆಯಾದರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಇದೇ ವೇಳೆ, ಬಸ್ಗಳಿಗೆ ಡೀಸೆಲ್ ಖರೀದಿಸಲು ಹಣವಿಲ್ಲದಿರುವ ಸಮಸ್ಯೆಯನ್ನು ಗಮನಕ್ಕೆ ತಂದಾಗ ತಕ್ಷಣ ಸಾರಿಗೆ ಸಚಿವರೊಂದಿಗೆ ಮಾತನಾಡಿ, ಅರ್ಧ ಗಂಟೆಯೊಳಗೆ ಡೀಸೆಲ್ ಖರೀದಿಗೆ ಅಗತ್ಯ ಹಣ ಬಿಡುಗಡೆ ಮಾಡಿಸಿದ್ದೇನೆ ಎಂದು ತಿಳಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಕೇವಲ ಭರವಸೆ ನೀಡಿದರೆ ಸಾಲದು, ಅವುಗಳಿಗೆ ಕಾರ್ಯರೂಪದಲ್ಲಿ ಪರಿಹಾರ ದೊರೆಯಬೇಕು. ರೈತರು ವ್ಯಕ್ತಪಡಿಸಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಅವುಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಬಸವರಾಜ್ ಹಿಟ್ನಾಳಗ, ಮಸ್ಕಿ ಶಾಸಕ ಬಸನಗೌಡ ತುರವಿಹಾಳ್, ವಿಧಾನ ಪರಿಷತ್ ಸದಸ್ಯ ಬಸವನಗೌಡ ಬಾದರ್ಲಿ, ಜಿಲ್ಲಾಧಿಕಾರಿ ಪೂವಿತಾ, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಾಂದೂ ಮುಂತಾದವರು ಇದ್ದರು.












