4:29 PM Tuesday9 - June 2026
ಬ್ರೇಕಿಂಗ್ ನ್ಯೂಸ್
ಬಿಪಿಎಲ್ ಮಾತ್ರವಲ್ಲ, ಎಪಿಎಲ್ ಕುಟುಂಬಗಳಿಗೂ ಗುಡ್‌ನ್ಯೂಸ್: ಆರೋಗ್ಯ ಸಚಿವ ಖಾದರ್ ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುವೆ; ನಂಗೆ ಬೆಂಗಳೂರು ಉಸ್ತುವಾರಿಯೂ ಬೇಡ, ಏನೂ ಬೇಡ: ರಾಮಲಿಂಗಾ… ಇಂಡಿಯಾ ಮೈತ್ರಿಕೂಟದ ಸಭೆ: ಎಸ್ ಐಆರ್ ವಿರುದ್ಧ ಸುಪ್ರೀಂಕೋರ್ಟ್ ಸಿಜೆಗೆ ದೂರು ಸೇರಿದಂತೆ… ಮಳೆಗಾಲ ಎಫೆಕ್ಟ್: ಜೂನ್ 10ರಿಂದ ಕೊಡಗು ಜಿಲ್ಲೆಯಲ್ಲಿ ಬುಲೆಟ್ ಟ್ಯಾಂಕರ್ ಸಹಿತ ಭಾರೀ… ಸೈಟ್ ಇಲ್ಲದವರಿಗೆ ಉಚಿತ ಸೈಟ್ ಭಾಗ್ಯ: ಮುಖ್ಯಮಂತ್ರಿ ಡಿಕೆಶಿ ಮಹತ್ವದ ಘೋಷಣೆ Mangaluru | ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಗೆ ಕಡಲನಗರಿಯಲ್ಲಿ ಭಾರೀ ಸ್ವಾಗತ Chikkamagaluru | ಅಧಿಕಾರಿಗಳ ನಿರ್ಲಕ್ಷ: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾದ ಕಡಿದಾಳು… ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ಕಳ್ಳತನ: 1 ಲಕ್ಷಕ್ಕೂ ಹೆಚ್ಚು ಮೌಲ್ಯದ… Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್

ಇತ್ತೀಚಿನ ಸುದ್ದಿ

ಕುರಿ ಕಾಯುವ ಕೆಲಸದ ಹಣದ ವಿಚಾರಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ; ಮೂವರು ಅರೆಸ್ಟ್

09/06/2026, 16:28

ಬೆಳಗಾವಿ(reporterkarnataka.com): ಕುರಿ ಕಾಯುವ ಕೆಲಸಕ್ಕೆ ಪಡೆದಿದ್ದ ಮುಂಗಡ ಹಣದ ವಿಚಾರವಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ನಡೆದಿದೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.ಹಾಲಪ್ಪ, ಮಂಜುನಾಥ ಮತ್ತು ಅರ್ಜುನ ಬಂಧಿತ ಆರೋಪಿಗಳಾಗಿದ್ದಾರೆ.

*ಏನಿದು ಘಟನೆ?:*
ದೊಡವಾಡ ಗ್ರಾಮದ ನಿವಾಸಿಯಾದ ಫಕ್ಕೀರಪ್ಪ ಕಿರಕಸಾಲಿ (38) ಎಂಬುವವರೇ ಕೊಲೆಯಾದ ದುರ್ದೈವಿ. ಇವರು ಕಳೆದ ಕೆಲವು ದಿನಗಳ ಹಿಂದೆ ಹಠಾತ್ತನೆ ಕಾಣೆಯಾಗಿದ್ದರು. ನಂತರ ಗ್ರಾಮದ ರುದ್ರವ್ವ ಬಸಪ್ಪ ಹೆಬ್ಬಳ್ಳಿ ಅವರಿಗೆ ಸೇರಿದ ಜೋಳದ ಜಮೀನಿನಲ್ಲಿರುವ ಹುಣಸೆ ಮರದ ಬಳಿ ಇವರ ಶವ ನಿಗೂಢವಾಗಿ ಪತ್ತೆಯಾಗಿತ್ತು. ಫಕ್ಕೀರಪ್ಪ ಸಾವಿನಿಂದ ಕಂಗಾಲಾದ ಅವರ ಪತ್ನಿ ನೀಲಮ್ಮ ಕಿರಕಸಾಲಿ ಅವರು ಬೈಲಹೊಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ಪೊಲೀಸರು ತನಿಖೆಯ ಭಾಗವಾಗಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಹತ್ವದ ಸುಳಿವು ಲಭ್ಯವಾಗಿತ್ತು. ಕಾಣೆಯಾಗಿದ್ದ ದಿನದಂದು ಆರೋಪಿಗಳಾದ ಹಾಲಪ್ಪ ಜವಳಿ ಮತ್ತು ಮಂಜುನಾಥ ತಳವಾರ ಅವರು ಫಕ್ಕೀರಪ್ಪನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಆ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಅಸಲಿ ಸತ್ಯ ಹೊರಬಿದ್ದಿದೆ.
10 ಸಾವಿರ ಹಣ ಪಡೆದುಕೊಂಡಿದ್ದ
ಕೊಲೆಯಾದ ಫಕ್ಕೀರಪ್ಪ ಈ ಹಿಂದೆ ಆರೋಪಿಗಳಿಂದ ಕುರಿ ಕಾಯುವ ಕೆಲಸ ಮಾಡಿಕೊಡುವುದಾಗಿ ಹೇಳಿ 10 ಸಾವಿರ ರೂಪಾಯಿ ಮುಂಗಡ ಹಣ ಪಡೆದುಕೊಂಡಿದ್ದ ಎನ್ನಲಾಗಿದೆ. ಆದರೆ, ಹಣ ಪಡೆದ ಕೆಲವೇ ದಿನಗಳಲ್ಲಿ ಫಕ್ಕೀರಪ್ಪ ಕೆಲಸವನ್ನು ಅರ್ಧಕ್ಕೆ ಬಿಟ್ಟು ತನ್ನ ಮನೆಗೆ ಮರಳಿದ್ದ. ಈ ವಿಚಾರವಾಗಿ ಆರೋಪಿಗಳು ಮತ್ತು ಫಕ್ಕೀರಪ್ಪನ ನಡುವೆ ತೀವ್ರ ವೈಷಮ್ಯ ಬೆಳೆದಿತ್ತು. ಕಳೆದ ಮೇ 28 ರಂದು ರಾತ್ರಿ ಇವರೆಲ್ಲರೂ ಒಟ್ಟಿಗೆ ಕುಳಿತು ಮದ್ಯ ಸೇವಿಸಿ ಊಟ ಮಾಡುವಾಗ ಮತ್ತೆ ಇದೇ ಹಣದ ಮರುಪಾವತಿ ವಿಷಯ ಮುನ್ನೆಲೆಗೆ ಬಂದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು, ಫಕ್ಕೀರಪ್ಪ ಆರೋಪಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ತೀವ್ರವಾಗಿ ಕೋಪಗೊಂಡ ಆರೋಪಿಗಳು ತಕ್ಷಣವೇ ಅಲ್ಲಿದ್ದ ಕೊಡಲಿ ಕಾವಿನಿಂದ ಫಕ್ಕೀರಪ್ಪನ ತಲೆ, ಕೈ, ಕಾಲು ಹಾಗೂ ಮೈಮೇಲೆ ಮನಬಂದಂತೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ತೀವ್ರತೆಗೆ ಫಕ್ಕೀರಪ್ಪನ ಬಲಗಾಲು ಮುರಿದು ಹೋಗಿದ್ದು, ಸ್ಥಳದಲ್ಲೇ ಅವರು ಪ್ರಾಣ ಬಿಟ್ಟಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಜಮೀನಿನಲ್ಲಿ ಎಸೆದು ಹೋಗಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಹಾಗೂ ಡಿಎಸ್‌ಪಿ ವೀರಯ್ಯ ಹಿರೇಮಠ ಅವರ ಸೂಕ್ತ ಮಾರ್ಗದರ್ಶನದಲ್ಲಿ, ಸಿಪಿಐ ಶಿವಾನಂದ ಗುಡಗನಟ್ಟಿ ಮತ್ತು ಪಿಎಸ್‌ಐ ಹೆಚ್.ಕೆ. ಪಾಟೀಲ ನೇತೃತ್ವದ ವಿಶೇಷ ಪೊಲೀಸ್ ತಂಡವು ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಈ ಕೊಲೆ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು