ಇತ್ತೀಚಿನ ಸುದ್ದಿ
ಬ್ರಹ್ಮಾವರ: ತಾಯಿಯ ಕಂಕುಳಿನಲ್ಲಿದ್ದ ಮಗು ಮೇಲೆ ತೆಂಗಿನ ಕಾಯಿ ಬಿದ್ದು ದಾರುಣ ಸಾವು
11/06/2026, 11:13
ಬ್ರಹ್ಮಾವರ(reporterkarnataka.com): ತಾಯಿಯ ಕಂಕುಳಿನಲ್ಲಿದ್ದ ಮಗುವಿನ ಮೇಲೆ ನೇರವಾಗಿ ತೆಂಗಿನ ಕಾಯಿ ಬಿದ್ದು ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟ ಘಟನೆ ಬ್ರಹ್ಮಾವರದ ಹೆರಂಜೆಯಲ್ಲಿ ಸಂಭವಿಸಿದೆ.
ತಾಯಿಯು ಎಂದಿನಂತೆ 6 ವರ್ಷ ಪ್ರಾಯದ ದೊಡ್ಡ ಮಗುವನ್ನು ಶಾಲೆಗೆ ಬಿಡಲು ಹೊರಟಿದ್ದರು, ಈ ವೇಳೆ ಸಣ್ಣ ಮಗುವನ್ನು ಕೂಡ ಎತ್ತಿಕೊಂಡು ತಾಯಿ ಹೊರಟು ಸ್ವಲ್ಪ ದೂರ ಸಾಗುವಷ್ಟರಲ್ಲಿ ದಾರಿ ಬದಿಯಲ್ಲಿದ್ದ ತೆಂಗಿನ ತೋಟದಲ್ಲಿದ್ದ ಮರದಿಂದ ಅಚಾನಕ್ ಆಗಿ ತೆಂಗಿನ ಕಾಯಿ ನೇರವಾಗಿ ಮಗುವಿನ ತಲೆಗೆ ಬಿತ್ತು. ಕೂಡಲೇ ಸ್ಥಳೀಯರು ಸೇರಿ ಮಗುವನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ಗಂಭೀರ ಏಟು ಆಗಿದ್ದರಿಂದ ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಜೆಯ ವೇಳೆಗೆ ಮಗು ಕೊನೆಯುಸಿರೆಳೆಯಿತು.
*ಸ್ಥಳೀಯರ ಪ್ರಯತ್ನ:*
ಮಗುವಿನ ಮೇಲೆ ತೆಂಗಿನ ಕಾಯಿ ಬಿದ್ದ ಸುದ್ದಿ ತಿಳಿದಾಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರು. ಪಕ್ಕದ ಮನೆಯ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಸ್ಥಳೀಯ ವ್ಯಕ್ತಿ ಮಗುವಿನ ಉಸಿರಾಟಕ್ಕೆ ನೆರವಾಗುವಂತೆ ಸಿಪಿಆರ್ ಮಾಡುತ್ತಾ ಸಾಗಿದರು. ಆಸ್ಪತ್ರೆಗೆ ತಲುಪುವವರೆಗೆ ಮಗು ಕಣ್ಣು ಬಿಟ್ಟು ಆಚೀಚೆ ನೋಡುತ್ತಿತ್ತು ಎಂದು ಮನೆಯವರು ತಿಳಿಸಿದ್ದಾರೆ.













