ಇತ್ತೀಚಿನ ಸುದ್ದಿ
ಬೆಂಗಳೂರು | ಸಿ.ಟಿ. ರವಿ ಹೇಳಿಕೆ ಖಂಡಿಸಿ ಕೇಶವ ಕೃಪಾ ಮುಂದೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಪ್ರತಿಭಟನೆ
08/11/2026, 11:23
ನಿಂದನಾತ್ಮಕ ಹೇಳಿಕೆ ಹಿಂಪಡೆದು ಬಹಿರಂಗ ಕ್ಷಮೆಯಾಚನೆಗೆ ಆಗ್ರಹ
ಬೆಂಗಳೂರು(reporterkarnataka.com): ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ವಿಧಾನ ಪರಿಷತ್ ಸದಸ್ಯ ಮತ್ತು ಬಿಜೆಪಿ ನಾಯಕ ಸಿ.ಟಿ. ರವಿ ನೀಡಿರುವ ನಿಂದನಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿ ‘ಕೇಶವ ಕೃಪಾ’ದ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಹಿಳಾ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.


ಈ ವೇಳೆ ಪ್ರತಿಭಟನಾಕಾರರು ಸಿ.ಟಿ. ರವಿ ಅವರ ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಾರ್ವಜನಿಕ ಜೀವನದಲ್ಲಿರುವ ನಾಯಕರು ತಮ್ಮ ಮಾತುಗಳಲ್ಲಿ ಘನತೆ ಮತ್ತು ಜವಾಬ್ದಾರಿಯನ್ನು ಕಾಪಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಟೀಕೆ ಮತ್ತು ವಿಚಾರಗಳ ಮೂಲಕ ಉತ್ತರ ನೀಡಬೇಕೇ ಹೊರತು, ವೈಯಕ್ತಿಕ ನಿಂದನೆ ಹಾಗೂ ಅಸಂಸ್ಕೃತ ಪದಪ್ರಯೋಗಗಳ ಮೂಲಕವಲ್ಲ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕರು ಹಾಗೂ ಪಕ್ಷದ ವಿರುದ್ಧ ಇಂತಹ ಅವಹೇಳನಕಾರಿ ಭಾಷೆ ಬಳಸುವುದನ್ನು ಕೂಡಲೇ ನಿಲ್ಲಿಸಬೇಕು. ನೀಡಿರುವ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಮಹಿಳಾ ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.












