ಇತ್ತೀಚಿನ ಸುದ್ದಿ
ನಡುರಾತ್ರಿ ಸಿಎಂ ಭೂಮಿ ನೋಡುವುದಕ್ಕೆ ಹೋದಾಗ ಕಳ್ಳರು ಎಂದು ಓಡಿಸಿದ್ದು ನಿಜವಾ? ಸುಳ್ಳಾ? ಎಂದು ಮುಖ್ಯಮಂತ್ರಿಗಳನ್ನೇ ಕೇಳಿ: ಕುಮಾರಸ್ವಾಮಿ
29/11/2026, 12:38
ಬೆಂಗಳೂರು(reporterkarnataka.com): ಈ ಮುಖ್ಯಮಂತ್ರಿ ರಾತ್ರಿ ಹೊತ್ತು ಏನು ಮಾಡುತ್ತಾರೆ
ಎಂಬುದಕ್ಕೆ ಇದು ಸಾಕ್ಷಿ ಅಲ್ಲವೇ? ಎಂದು ಸ್ಪೋಟಕ ಮಾಹಿತಿಯನ್ನು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ.
ಜಪಾನ್ ಗೆ ಹೋಗಿ ಟೊಯೊಟಾ ಕಂಪನಿಗೆ ಸಿಎಂ ಹೋಗುತ್ತಾರೆ! ಆದರೆ, ಟೊಯೊಟಾ ಪ್ರಾಜೆಕ್ಟ್ 4 ಮಹಾರಾಷ್ಟಕ್ಕೆ ಯಾಕೆ ಹೋಯಿತು? ಎಂದು ಸಿಎಂಗೆ ಕುಮಾರಸ್ವಾಮಿ ಪ್ರಶ್ನೆ ಹಾಕಿದ್ದಾರೆ.
ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರದ ಬಗ್ಗೆ ನೋಡೋಕೂ ಟೈಂ ಇಲ್ಲ. ಆದರೆ, ಖಾಲಿ ಜಾಗ ಎಲ್ಲಿದೆ, ಸರ್ಕಾರಿ ಜಾಗ ಎಲ್ಲಿದೆ ಅಂತಾ ನೋಡೋಕಷ್ಟೇ ಟೈಂ ಇದೆ. ಇತ್ತೀಚೆಗೆ ಬೆಂಗಳೂರಿನ ಸುತ್ತಮುತ್ತಲಿನಲ್ಲೇ ಜಾಗ ನೋಡೋಕೆ ಹೋದಾಗ ಕಳ್ಳರು ಬಂದಿದ್ದಾರೆ ಅಂತಾ ಹಳ್ಳಿ ಜನರು ಓಡಿಸಿಕೊಂಡು ಬಂದಿದ್ದರು ಎಂಬ ಸ್ಪೋಟಕ ಅಂಶವನ್ನು ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗಪಡಿಸಿದರು.
ಬೆಂಗಳೂರಿನ ಜಯನಗರದ ಕ್ಲೌಡ್ನೈನ್ ಆಸ್ಪತ್ರೆ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಡೆಯುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಇತ್ತೀಚೆಗೆ 20 ಗುಂಟೆ ಜಮೀನಿಗೆ ರೆವಿನ್ಯೂ ಇನ್ಸ್ಪೆಕ್ಟರ್ ₹50,000 ಲಂಚ ತಗೊಂಡು ಸಸ್ಪೆಂಡ್ ಆಗಿದ್ದಾರೆ. ಅದು ಭ್ರಷ್ಟಾಚಾರ ಅಲ್ವಾ? ಅವರ ಮಿನಿಸ್ಟರ್ ಹೇಳಿದಂಗೆ ಅದು ಗೌರವಧನನಾ? ಗೌರವದಿಂದ ಕೊಡಬೇಕು ಅಂದರಲ್ಲ ಅದಾ ಭ್ರಷ್ಟಾಚಾರವಾ.. ಅಲ್ಲವಾ? ಎಷ್ಟೋ ಕಡೆ ಕೆಲಸ ಮಾಡಲು ದುಡ್ಡು ತಗೊಂಡು ಸಿಕ್ಕಿಬೀಳುತ್ತಿದ್ದಾರೆ. ನನ್ನ ಬಳಿ ಟನ್ಗಟ್ಟಲೇ ದಾಖಲೆಗಳಿವೆ ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿಗಳು ಸೋಂಪುರ ಹತ್ತಿರ ಅಥವಾ ಅದರ ಸುತ್ತಮುತ್ತಲಿನ ಯಾವುದೋ ಜಾಗದಲ್ಲಿ 150 ಎಕರೆ ಜಮೀನು ನೋಡುವುದಕ್ಕೆ ರಾತ್ರಿ ಹೊತ್ತಿನಲ್ಲಿ ಖಾಸಗಿ ಕಾರಿನಲ್ಲಿ ಹೋಗಿದ್ದರು. ಆಗ ಇಷ್ಟೋತ್ತಲ್ಲಿ ಯಾರೋ ಕಳ್ಳರು ಬಂದಿದ್ದಾರೆ ಎಂದು ಹಳ್ಳಿ ಜನರು ಓಡಿಸಿಕೊಂಡು ಬಂದಿದ್ದಾರೆ. ಇದು ಸುಳ್ಳೋ ನಿಜವೋ ಎಂಬುದನ್ನು ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ಹೆಚ್ಡಿಕೆ ಸುದ್ದಿಗಾರರಿಗೆ ಹೇಳಿದರು.
ಮುಖ್ಯಮಂತ್ರಿ ಜಪಾನ್ ಗೆ ಹೋದರೂ ಕುಮಾರಸ್ವಾಮಿ ಅವರದು, ದೇವೇಗೌಡರದ್ದು ಸಾಕ್ಷಿಗುಡ್ಡೆ ಕೇಳುತ್ತಾರೆ. ಟೊಯೋಟಾ ಹರಿಯಾಣಕ್ಕೆ ಅಥವಾ ಮಹಾರಾಷ್ಟ್ರಕ್ಕೋ ಹೋಗುತ್ತಿತ್ತು. ಆಗ ದೇವೇಗೌಡರು ಮನವಿ ಮಾಡಿ ಟೊಯೋಟಾ ಕಂಪನಿಯನ್ನು ಇಲ್ಲಿಗೆ ತಂದರು. ಕಾಂಗ್ರೆಸ್ ನವರು ಅದಕ್ಕೆ ಮರಳು, ಇಟ್ಟಿಗೆ ಪೈಪೋಟಿಗೆ ಬಿದ್ದು ದುಡ್ಡು ಮಾಡಿಕೊಂಡರು. ಆ ಕೆಲಸ ನಾವು ಮಾಡಲಿಲ್ಲ. ಟೊಯೊಟಾ ಕಂಪನಿಯವರು ತಮ್ಮ ಪ್ರಾಜೆಕ್ಟ್ 4ನ್ನು ಮಹಾರಾಷ್ಟ್ರಕ್ಕೆ ಯಾಕೆ ತೆಗೆದುಕೊಂಡು ಹೋದರು? ಅಲ್ಲಿ ₹25,000 ಕೋಟಿ ಹೂಡಿಕೆ ಮಾಡುತ್ತಿದ್ದಾರೆ. ಟೊಯೋಟಾದವರು ಮಹಾರಾಷ್ಟ್ರಕ್ಕೆ ಯಾಕೆ ಹೋದರು? ಇದಕ್ಕೆ ಯಾರು ಕಾರಣ? ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.












