ಇತ್ತೀಚಿನ ಸುದ್ದಿ
ದೇವೇಗೌಡರಿಗೆ ರಾಜಸಭಾ ಟಿಕೆಟ್ ಕೈತಪ್ಪಲು ಅಸಲಿ ಕಾರಣ ಏನು?: ಕೇಂದ್ರ ಸಚಿವ ಕುಮಾರಸ್ವಾಮಿ ಏನು ಹೇಳ್ತಾರೆ?
09/06/2026, 18:43
ಬೆಂಗಳೂರು(reporterkarnataka.com): ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ರಾಜ್ಯಸಭಾ ಚುನಾವಣೆಗೆ ಎನ್ಡಿಎ ಟಿಕೆಟ್ ಕೈತಪ್ಪಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.
ವಯಸ್ಸಿನ ಕಾರಣದಿಂದಾಗಿ ಬಿಜೆಪಿ ನಾಯಕರು ದೇವೇಗೌಡರಿಗೆ ಟಿಕೆಟ್ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ದೇವೇಗೌಡರಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಮಾಡಿದ ಅಪಮಾನ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರುತ್ತಿದ್ದಾರೆ. ಈ ಎಲ್ಲ ಚರ್ಚೆಗಳ ನಡುವೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಲು ಅಸಲಿ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ರಾಜ್ಯಸಭಾ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ಒಬಿಸಿ ನಾಯಕ ಪ್ರೊ. ಎಂ. ನಾಗರಾಜ ಅವರ ಹೆಸರನ್ನು ಬಿಜೆಪಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಮಾಜಿ ಪ್ರಧಾನಿ ದೇವೇಗೌಡಿರಿಗೆ ಟಿಕೆಟ್ ಕೈತಪ್ಪಿದ ಬಗ್ಗೆ ರಣದೀಪ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಕಿಡಿಕಾರಿದ್ದರು. ಇದೀಗ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿದ್ದೇಕೆ ಎಂಬ ಕಾರಣವನ್ನು ಸ್ವತಃ ಅವರ ಪುತ್ರ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ತಾಲೂಕಿನ ತಗ್ಗಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯಸಭೆ ಟಿಕೆಟ್ಗೆ ಹೆಚ್.ಡಿ.ದೇವೇಗೌಡರು ಅರ್ಜಿಯೇ ಹಾಕಿರಲಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಹೆಚ್.ಡಿ.ದೇವೇಗೌಡರ ಬಗ್ಗೆ ಕಾಂಗ್ರೆಸ್ಸಿಗರಿಗೆ ಈಗ ಅನುಕಂಪ ಬಂದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಭಯ ಶುರುವಾಗಿದ್ದು, ನಮ್ಮ ನಡುವೆ ಬಿರುಕು ತರಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ.
ದೇವೇಗೌಡರು ಅಧಿಕಾರಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದಿದ್ದರು ಎಂದು ಹೆಚ್ಡಿಕೆ ತಿಳಿಸಿದ್ದಾರೆ.
ಕಳೆದ ಬಾರಿ ಹೆಚ್ಡಿಡಿ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಬೆಂಬಲ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಲಿಲ್ಲ. ಬದಲಾಗಿ ದೇವೇಗೌಡರ ವಿರುದ್ಧ ಇನ್ನೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಕಳೆದ ಬಾರಿ ಅಭ್ಯರ್ಥಿ ಹಾಕಲ್ಲ ಎಂದು ಯಡಿಯೂರಪ್ಪನವರು ಕರೆ ಮಾಡಿ ತಿಳಿಸಿದ್ರು. ಅದಾದ ಬಳಿಕ ನಾನು ಒತ್ತಾಯ ಮಾಡಿ ಅಭ್ಯರ್ಥಿ ಮಾಡಿದ್ದು ಎಂದು ಹೇಳಿದರು.
ಒಕ್ಕಲಿಗರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಒಕ್ಕಲಿಗ ಸಿಎಂ ಇರಬೇಕಾದರೆ ರಾಜ್ಯಸಭೆ ಸ್ಥಾನ ಪಡೆದು ಏನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.












