ಇತ್ತೀಚಿನ ಸುದ್ದಿ
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧ ʼಧಾರ್ಮಿಕ ಸಂಪ್ರದಾಯದ ಭಾಗʼ: ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೇಂದ್ರ ಸರಕಾರ
07/04/2026, 21:02
ತಿರುವನಂತಪುರಂ(reporterkarnataka.com):ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವು ಲಿಂಗ ತಾರತಮ್ಯದ ವಿಷಯವಲ್ಲ; ಅದು ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗೆ ಸಂಬಂಧಿಸಿದ್ದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಶಬರಿಮಲೆಯಲ್ಲಿ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ಅಯ್ಯಪ್ಪ ಸ್ವಾಮಿಯ ‘ನೈಷ್ಠಿಕ ಬ್ರಹ್ಮಚಾರಿ'(ಜೀವನಪೂರ್ತಿ ಬ್ರಹ್ಮಚರ್ಯಕ್ಕೆ ಕಟ್ಟಿಬದ್ಧನಾದವನು) ಸ್ವಭಾವದಿಂದ ಉಗಮಿಸಿದ್ದು, ಅದು ಅಶುದ್ಧತೆ ಅಥವಾ ಕೀಳರಿಮೆ ಆಧಾರಿತವಲ್ಲ ಎಂದು ಕೇಂದ್ರವು ವಿಚಾರಣೆಗೆ ಮುನ್ನ ಸಲ್ಲಿಸಿದ ಲಿಖಿತ ಅರ್ಜಿಯಲ್ಲಿ ತಿಳಿಸಿದೆ.
“ಮಹಿಳೆಯರಿಗೆ ಪ್ರವೇಶ ನೀಡಿದರೆ ದೇವಸ್ಥಾನದ ಪೂಜಾ ಪದ್ಧತಿಯ ಸ್ವರೂಪವೇ ಬದಲಾಗುತ್ತದೆ. ಇದರಿಂದ ಸಂವಿಧಾನ ರಕ್ಷಿಸುವ ಧಾರ್ಮಿಕ ವೈವಿಧ್ಯತೆ ದುರ್ಬಲವಾಗಬಹುದು ಎಂದು ಕೇಂದ್ರ ಸರಕಾರ ಹೇಳಿದೆ. ಶತಮಾನಗಳಿಂದ ಭಕ್ತರು ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ” ಎಂದು ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
ಈ ವಿಷಯವು ಧಾರ್ಮಿಕ ನಂಬಿಕೆ ಹಾಗೂ ಪಂಗಡದ ಸ್ವಾಯತ್ತತೆಯ ವ್ಯಾಪ್ತಿಗೆ ಸೇರಿದ್ದು, ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯನ್ನು ಮೀರುತ್ತದೆ ಎಂದು ಕೇಂದ್ರ ವಾದಿಸಿದೆ. ಮುಟ್ಟಿನ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವನ್ನು ಮುಂದುವರಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರವು ಆಗ್ರಹಿಸಿದೆ.
ಧಾರ್ಮಿಕ ಆಚರಣೆಗಳನ್ನು “ವೈಚಾರಿಕತೆ”, “ಆಧುನಿಕತೆ” ಅಥವಾ “ವೈಜ್ಞಾನಿಕ ಮಾನದಂಡ”ಗಳ ಆಧಾರದ ಮೇಲೆ ನಿರ್ಧರಿಸಬಾರದು ಎಂದು ಕೇಂದ್ರ ಸರಕಾರ ಎಚ್ಚರಿಸಿದೆ. ಇಂತಹ ವಿಧಾನವು ನ್ಯಾಯಾಲಯಗಳನ್ನು ನಂಬಿಕೆಯ ವಿಷಯಗಳಲ್ಲಿ ತಾತ್ವಿಕ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಗೆ ತಳ್ಳಬಹುದು ಎಂದು ಹೇಳಿದೆ.
ಒಂದು ಪದ್ಧತಿ ತರ್ಕಬದ್ಧವೇ ಅಥವಾ ಆಧುನಿಕ ಮೌಲ್ಯಗಳಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಸಾಂವಿಧಾನಿಕ ವಿಮರ್ಶೆಯ ಭಾಗವಲ್ಲ ಎಂದು ಕೇಂದ್ರ ಸರಕಾರ ವಾದಿಸಿದೆ. ನ್ಯಾಯಾಧೀಶರು ಧಾರ್ಮಿಕ ಪಠ್ಯಗಳನ್ನು ಅರ್ಥೈಸಲು ಅಥವಾ ದೇವತಾಶಾಸ್ತ್ರದ ಪ್ರಶ್ನೆಗಳನ್ನು ತೀರ್ಮಾನಿಸಲು ತರಬೇತಿ ಪಡೆದವರಲ್ಲ ಎಂಬುದನ್ನೂ ಅದು ಸೂಚಿಸಿದೆ.












