ಇತ್ತೀಚಿನ ಸುದ್ದಿ
ವಿರಾಜಪೇಟೆ | ಕಣ್ಣಂಗಾಲ ಗ್ರಾಮದಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ: ಮೃತನ ಕುಟುಂಬಕ್ಕೆ ಪರಿಹಾರ ವಿತರಣೆ
10/08/2026, 19:44
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲೂಕು ಅಮ್ಮತ್ತಿ ಸಮೀಪದ ಕಣ್ಣಂಗಾಲ ಗ್ರಾಮ ಪಂಚಾಯತಿಯ ಯಡೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ಕಾರ್ಮಿಕ ಅಣ್ಣಪ್ಪನ ಕುಟುಂಬಕ್ಕೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ತೆರಳಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ, ದುರ್ದೈವಿಯ ಕುಟುಂಬಕ್ಕೆ ಸರ್ಕಾರ ನೀಡುವ ಪರಿಹಾರ ಮಟ್ಟದ ಮೊದಲ ಭಾಗವಾಗಿ ₹5 ಲಕ್ಷದ ಚೆಕ್ ವಿತರಿಸಿದರು.


ಘಟನೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಬಳಿಕ ಅರಣ್ಯ ಕಂಟ್ರೋಲ್ ರೂಂಗೆ ಭೇಟಿ ನೀಡಿದ ಮಾನ್ಯ ಶಾಸಕರು, ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ DFO ಹಾಗೂ ಇತರ ಅಧಿಕಾರಿಗಳಿಗೆ 24*7 ಪರಿಸ್ಥಿತಿಯನ್ನು ಗಮನಿಸುವಂತೆಯೂ ಹಾಗೂ ರೇಡಿಯೋ ಕಾಲರ್ ಅಳವಡಿಸಿದ ಕಾಡುಪ್ರಾಣಿಗಳ ಪ್ರತಿ ಚಲನವಲನಗಳನ್ನು ಗಮನಿಸುತ್ತಾ, ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗ್ರಿತರಿರುವಂತೆ ಸೂಚಿಸುತ್ತಿರಬೇಕೆಂದು ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಣ್ಣಂಗಾಲ ವಲಯ ಅಧ್ಯಕ್ಷರಾದ ಮಚ್ಚಾರಂಡ ಕಿರಣ್,ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.













