6:21 AM Sunday8 - March 2026
ಬ್ರೇಕಿಂಗ್ ನ್ಯೂಸ್
ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ

ಇತ್ತೀಚಿನ ಸುದ್ದಿ

ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ

05/02/2026, 20:50

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಎಚ್.ಕೃಷ್ಣ ಮತ್ತು ತಂಡದ ಸದಸ್ಯರು ನಗರದ ನ್ಯಾಯಬೆಲೆ ಅಂಗಡಿ, ಆಹಾರ ಧಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರ, ಮಧ್ಯಾಹ್ನದ ಉಪಾಹಾರ ಯೋಜನೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿರುವ ಎನ್‍ಆರ್‍ಸಿ ಘಟಕ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ.ದೊಡ್ಡಲಿಂಗನವರ್, ಎ.ರೋಹಿಣಿ ಪ್ರಿಯಾ, ಕೆ.ಎಸ್. ವಿಜಯಲಕ್ಷ್ಮಿ ಹಾಗೂ ಸದಸ್ಯ ಕಾರ್ಯದರ್ಶಿ ಸುಜಾತ ಡಿ. ಹೊಸಮನಿ ಅವರು ಪರಿಶೀಲನಾ ಸಂದರ್ಭದಲ್ಲಿ ಇದ್ದು, ಆಹಾರ ಸುರಕ್ಷತೆ, ಪೌಷ್ಠಿಕ ಆಹಾರ ವಿತರಣೆ, ಮತ್ತಿತರ ಬಗ್ಗೆ ಮಾಹಿತಿ ಪಡೆದರು.
ಮೊದಲಿಗೆ ನಗರದ ಜನತಾ ಬಜಾರ್ ಸಂಖ್ಯೆ 59ಕ್ಕೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಮತ್ತು ತಂಡದ ಸದಸ್ಯರು ಆಹಾರ ದಾಸ್ತಾನುವಿನಲ್ಲಿ ವ್ಯತ್ಯಾಸ, ಜಾಗೃತಿ ನಾಮಫಲಕ ಪ್ರದರ್ಶನ ಹಾಗೂ ತೂಕ ನವೀಕರಣ ಪತ್ರ ಇಲ್ಲದಿರುವುದು ಸೇರಿದಂತೆ ಹಲವು ನ್ಯೂನತೆಗಳನ್ನು ಕಂಡುಬಂದಿರುವುದನ್ನು ಮನಗಂಡ ಆಹಾರ ಆಯೋಗದ ಅಧ್ಯಕ್ಷರಾದ ಕೃಷ್ಣ ಅವರು ಅಮಾನತು ಮಾಡುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸ್ಥಳದಲ್ಲಿಯೇ ಸೂಚಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭೋದಕ ಆಸ್ಪತ್ರೆಯ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಜಿಲ್ಲಾಸ್ಪತ್ರೆ ಎನ್‍ಆರ್‍ಸಿ ಘಟಕಕ್ಕೆ ಭೇಟಿ ನೀಡಿ ಕಡತ ನಿರ್ವಹಣೆ ಪರಿಶೀಲಿಸಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಸಮರ್ಪಕ ನಿರ್ವಹಣೆ ಮಾಡದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಗುಣಮಟ್ಟದ ಹಾಗೂ ಪೌಷ್ಠಿಕ ಆಹಾರ ವಿತರಿಸಬೇಕು. ಯಾವುದೇ ಕಾರಣಕ್ಕೂ ಮುಲಾಜಿಗೆ ಒಳಗಾಗಬಾರದು ಎಂದು ತಾಕೀತು ಮಾಡಿದರು. ಸರ್ಕಾರಿ ಆಸ್ಪತ್ರೆಯನ್ನು ನಂಬಿ ಹಲವು ಬಡ ಕುಟುಂಬಗಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಅವರಿಗೆ ಸರಿಯಾದ ಊಟೋಪಚಾರ ಮತ್ತು ವೈದ್ಯಕೀಯ ಚಿಕಿತ್ಸೆ ನೀಡುವುದು ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಆಹಾರ ಆಯೋಗದ ಅಧ್ಯಕ್ಷರು ಸ್ಪಷ್ಟ ಸೂಚನೆ ನೀಡಿದರು. ಬಳಿಕ ದಾಸವಾಳ ಬಳಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಆಹಾರ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಅಲ್ಲಿನ ಮಕ್ಕಳ ಹಾಜರಾತಿ, ತಾಯಿ ಕಾರ್ಡು ವಿತರಣೆ, ಗರ್ಭಿಣೀಯರು ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ಪೂರೈಕೆ, ಮೊಟ್ಟೆ, ಕಾರದಪುಡಿ, ಹೆಸರು ಕಾಳು, ಸಕ್ಕರೆ, ಅಕ್ಕಿ, ಗೋಧಿ ವಿತರಣೆ ಬಗ್ಗೆ ಸಂಬಂಧಪಟ್ಟವರಿಗೆ ಸಂಚಾರಿ ಮೊಬೈಲ್ ಮೂಲಕ ಕರೆ ಮಾಡಿ ಖಾತರಿಪಡಿಸಿಕೊಂಡರು. ಮೊಟ್ಟೆ, ಹೆಸರು ಕಾಳು, ಸಕ್ಕರೆ, ಅಕ್ಕಿ, ಗೋಧಿ ಮತ್ತಿತರ ಪೌಷ್ಠಿಕ ಆಹಾರ ವಿತರಿಸುತ್ತಿದ್ದಾರೆ ಎಂದು ಗರ್ಭಿಣೀಯೊಬ್ಬರು ಪ್ರತಿಕ್ರಿಯಿಸಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ರಾಜ್ಯ ಆಹಾರ ಆಯೊಗದ ಅಧ್ಯಕ್ಷರು ಮತ್ತು ಸದಸ್ಯರ ತಂಡವು ಮಧ್ಯಾಹ್ನದ ಬಿಸಿಯೂಟ ಯೋಜನೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ಸರ್ಕಾರ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಸಾಕಷ್ಟು ಹಣ ನೀಡುತ್ತಿದೆ. ಬಡ ಮಕ್ಕಳಿಗೆ ಸದ್ಬಳಕೆಯಾಗಬೇಕು. ಪೌಷ್ಠಿಕ ಆಹಾರದ ಜೊತೆಗೆ ವಿದ್ಯಾರ್ಜನೆಗೆ ಕಡೆಗೆ ಮಕ್ಕಳು ಗಮನ ನೀಡಬೇಕು. ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುತ್ತಿದ್ದು, ಸರ್ಕಾರದ ಯೋಜನೆಗಳು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಹೇಳಿದರು.
ನಂತರ ನಗರದ ರೈತ ಸಂಪರ್ಕ ಕೇಂದ್ರ ಹಾಗೂ ಕೀಟನಾಟಕ ಔಷಧಿ ದಾಸ್ತಾನು ಮಳಿಗೆ ವೀಕ್ಷಿಸಿದ ಅಧ್ಯಕ್ಷರು ಮತ್ತು ತಂಡದವರು ಕೀಟನಾಶಕ ಔಷಧಿ ವಿತರಣೆ ಬಗ್ಗೆ ಪರಿಶೀಲಿಸಿ, ಮಾಹಿತಿ ಪಡೆದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಅನಿಲ್ ಧಾವನ್ ಹಾಗೂ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಭೀಮರಾಯ ಕಲ್ಲೂರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ.ಎ.ಜೆ.ಲೋಕೇಶ್, ಡಾ.ನಂಜುಂಡಯ್ಯ, ಡಾ.ಸೋಮಶೇಖರ್, ಡಾ.ಅಭಿನಂದನ್, ಡಾ.ಪುರುಷೋತ್ತಮ, ಆಹಾರ ಇಲಾಖೆಯ ಉಪ ನಿರ್ದೇಶಕರಾದ ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಇತರರು ತಮ್ಮ ಇಲಾಕೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.
ರಾಜ್ಯ ಆಹಾರ ಆಯೋಗದ ಸದಸ್ಯರ ತಂಡವು ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲ್ಲೂಕುಗಳಿಗೆ ಭೇಟಿ ಪರಿಶೀಲಿಸಿ, ಮಾಹಿತಿ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು