ಇತ್ತೀಚಿನ ಸುದ್ದಿ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ | ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ‘ಚೂಡಿದಾರ್ ಟಾಪ್’ ಆಯ್ತು ಪ್ರಮುಖ ಸಾಕ್ಷಿ
24/09/2026, 20:52
ನವದೆಹಲಿ(reporterkarnataka.com):ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ. ಈ ಮರುತನಿಖೆಯ ಆದೇಶದ ಬೆನ್ನಲ್ಲೇ, ಪ್ರಕರಣದಲ್ಲಿ ‘ಮೆಟೀರಿಯಲ್ ಆಬ್ಜೆಕ್ಟ್ ನಂ.15’ ಎಂದು ಗುರುತಿಸಲಾಗಿದ್ದ ಸೌಜನ್ಯ ಅವರ ‘ಚೂಡಿದಾರ್ ಟಾಪ್’ ಇದೀಗ ಅತ್ಯಂತ ನಿರ್ಣಾಯಕ ಸಾಕ್ಷ್ಯವಾಗಿ ಮುನ್ನೆಲೆಗೆ ಬಂದಿದೆ. ಈ ವಸ್ತುವಿಗೆ ಇನ್ನೂ ಸಂಪೂರ್ಣ ಸಾಕ್ಷಿ ಮೌಲ್ಯವಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.
ಹಿಂದೆ ವಿಧಿವಿಜ್ಞಾನ ತಜ್ಞರಾದ ವಿನೋದ್ ಜೆ. ಲಕ್ಕಪ್ಪನ್ ಅವರು ನೀಡಿದ್ದ ಸಾಕ್ಷ್ಯದ ಪ್ರಕಾರ, ಸೌಜನ್ಯ ಅವರ ಚೂಡಿದಾರ್ ಟಾಪ್‌ನಲ್ಲಿ ಪ್ರಕರಣದ ಮುಖ್ಯ ಆರೋಪಿ ಎಂದು ಬಿಂಬಿತರಾಗಿದ್ದ ವ್ಯಕ್ತಿಯನ್ನು ಹೊರತುಪಡಿಸಿ ಇತರ ಕೆಲವು ವ್ಯಕ್ತಿಗಳ ಕೂದಲುಗಳು ಪತ್ತೆಯಾಗಿದ್ದವು. ಈಗ ಪತ್ತೆಯಾಗುವ ಹೊಸ ಶಂಕಿತರ ರಕ್ತದ ಮಾದರಿ ಅಥವಾ ಡಿಎನ್‌ಎಯನ್ನು ಈ ಚೂಡಿದಾರ್ ಟಾಪ್‌ನಲ್ಲಿ ಸಿಕ್ಕ ಮಾದರಿಗಳೊಂದಿಗೆ ಹೋಲಿಸಿ ಪರೀಕ್ಷಿಸಲು ಅವಕಾಶವಿದೆ. ಇದೇ ಅಂಶವನ್ನು ಸುಪ್ರೀಂ ಕೋರ್ಟ್ ಪ್ರಮುಖವಾಗಿ ಪರಿಗಣಿಸಿ ಮರುತನಿಖೆಗೆ ಅಸ್ತು ಎಂದಿದೆ.














