ಇತ್ತೀಚಿನ ಸುದ್ದಿ
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ತುಳುನಾಡಿನ ಕಂಬಳ ಅನಾವರಣ: ಅ.16ರಂದು ಪುತ್ತೂರಿನಿಂದ ಕೋಣಗಳ ಪಯಣ
25/09/2026, 21:58
ಮೈಸೂರು(reporterkarnataka.com): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕರಾವಳಿಯ ಜಾನಪದ ವೀರ ಕ್ರೀಡೆಯಾದ ಕಂಬಳದ ಗತ್ತು-ಗಾಂಭೀರ್ಯ ಅನಾವರಣಗೊಳ್ಳಲಿದ್ದು, ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ ಭರ್ಜರಿ ಕಂಬಳ ಕೂಟ ಆಯೋಜಿಸಲಾಗಿದೆ.
ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ಕರಾವಳಿ ಭಾಗದ ಕಂಬಳ ಸಮಿತಿ ಪದಾಧಿಕಾರಿಗಳು ಹಾಗೂ ಕೋಣಗಳ ಯಜಮಾನರೊಂದಿಗೆ ಮೈಸೂರು ಜಿಲ್ಲಾಡಳಿತದ ನಿಯೋಗ ಮಹತ್ವದ ಸಮಾಲೋಚನೆ ನಡೆಸಿ ಅಧಿಕೃತ ಆಹ್ವಾನ ನೀಡಿದೆ. ಕರಾವಳಿಯಿಂದ ಸುಮಾರು 150ರಿಂದ 160 ಜೊತೆ ಆಯ್ದ ಹಾಗೂ ಪ್ರಸಿದ್ಧ ಕೋಣಗಳು ಮೈಸೂರು ದಸರಾ ಕಂಬಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
20 ಎಕರೆ ಜಾಗದಲ್ಲಿ ‘ವಿಜಯ ದಶಮಿ’ ಕರೆ
ಮೈಸೂರಿನ ರಿಂಗ್ರೋಡ್ ವ್ಯಾಪ್ತಿಯ ಸುಮಾರು 20 ಎಕರೆ ವಿಸ್ತೀರ್ಣದ ಜಾಗದಲ್ಲಿ ಕಂಬಳದ ಕರೆ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ನಡೆಯುತ್ತಿದೆ. ಜಿಲ್ಲಾಡಳಿತದ ತೀರ್ಮಾನದಂತೆ ಕಂಬಳದ ಕರೆಯನ್ನು ‘ವಿಜಯ ದಶಮಿ’ ಎಂದು ನಾಮಕರಣ ಮಾಡಲಾಗಿದೆ.
ಕರೆಯ ಒಟ್ಟು ಉದ್ದ 147 ಮೀಟರ್ ಇದ್ದು, ಓಟದ ಅಂತರ 140 ಮೀಟರ್ ಇರಲಿದೆ. ಕರೆಯ ಗುಣಮಟ್ಟ ಹಾಗೂ ಕೋಣಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಕ್ಟೋಬರ್ 15ರಂದು ಐದು ಜೊತೆ ಕೋಣಗಳನ್ನು ಮೈಸೂರಿಗೆ ಕರೆದೊಯ್ದು ಪ್ರಾಯೋಗಿಕ ಓಟ ನಡೆಸಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
*ಅ.16ರಂದು ಪುತ್ತೂರಿನಿಂದ ಕೋಣಗಳ ಪಯಣ:*
ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಸುದೀರ್ಘ ಪ್ರಯಾಣದಿಂದ ಯಾವುದೇ ಆಯಾಸ ಅಥವಾ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ.
ಅಕ್ಟೋಬರ್ 16ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಎಲ್ಲ ಕೋಣಗಳು ಜಮಾಯಿಸಲಿದ್ದು, ಅಲ್ಲಿಂದ ವಾಹನಗಳ ಮೂಲಕ ಒಟ್ಟಾಗಿ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.
ಘಟ್ಟ ಪ್ರದೇಶದ ಮೂಲಕ ಸಾಗುವ ಕೋಣಗಳಿಗೆ ಮಡಿಕೇರಿಯಲ್ಲಿ ಸುಮಾರು 2ರಿಂದ 3 ಗಂಟೆಗಳ ಕಾಲ ಕಡ್ಡಾಯ ವಿಶ್ರಾಂತಿ ನೀಡಲಾಗುತ್ತದೆ. ಈ ವೇಳೆ ಮೇವು, ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
ಅಕ್ಟೋಬರ್ 16ರ ರಾತ್ರಿ 8.30ರಿಂದ 9 ಗಂಟೆಯೊಳಗೆ ಮೈಸೂರು ತಲುಪುವ ಕೋಣಗಳಿಗೆ ಅಕ್ಟೋಬರ್ 17ರಂದು ಇಡೀ ದಿನ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಮೈಸೂರಿನ ತಂಪಾದ ಹವಾಮಾನ ಕೋಣಗಳಿಗೆ ಅನುಕೂಲಕರವಾಗಿರಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
*ಅ.18ರಂದು ಕಂಬಳಕ್ಕೆ ಚಾಲನೆ*
ಅಕ್ಟೋಬರ್ 18ರಂದು ಬೆಳಿಗ್ಗೆ ಉದ್ಘಾಟನೆಯೊಂದಿಗೆ ಕಂಬಳ ಆರಂಭವಾಗಲಿದೆ. ಅಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 19ರಂದು ತಡರಾತ್ರಿ 12 ಗಂಟೆಯೊಳಗೆ ಬಹುಮಾನ ವಿತರಣೆಯೊಂದಿಗೆ ಕಂಬಳ ಸಮಾರೋಪಗೊಳ್ಳಲಿದೆ.
*160 ಜೊತೆ ಆಯ್ದ ಕೋಣಗಳು; ಸಾರಿಗೆ ಭತ್ಯೆ* ಮೈಸೂರು ದಸರಾ ಕಂಬಳದಲ್ಲಿ ಸೀನಿಯರ್ ಹಾಗೂ ಉತ್ತಮ ಸಮಯ ದಾಖಲಿಸಿರುವ ಅರ್ಹ ಕೋಣಗಳಿಗೆ ಆದ್ಯತೆ ನೀಡಲಾಗುತ್ತದೆ. ಉಪಸಮಿತಿಯ ಪರಿಶೀಲನೆಯ ಬಳಿಕ ಸುಮಾರು 150ರಿಂದ 160 ಜೊತೆ ಕೋಣಗಳನ್ನು ಆಯ್ಕೆ ಮಾಡಿ ಮೈಸೂರಿಗೆ ಕಳುಹಿಸಲಾಗುತ್ತದೆ.
ಭಾಗವಹಿಸುವ ದೊಡ್ಡ ಜೊತೆ ಕೋಣಗಳಿಗೆ ₹65,000 ಹಾಗೂ ಸಣ್ಣ ಜೊತೆ ಕೋಣಗಳಿಗೆ ₹50,000 ಸಾರಿಗೆ ಭತ್ಯೆಯನ್ನು ಸರ್ಕಾರ ನಿಗದಿಪಡಿಸಿದೆ.
ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 16 ಗ್ರಾಂ (2 ಪವನ್) ಚಿನ್ನ ಹಾಗೂ ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ ನೀಡಲು ನಿರ್ಧರಿಸಲಾಗಿದೆ.
ಆದರೆ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆಯುವವರಿಗೂ ಚಿನ್ನದ ಪದಕ ನೀಡಬೇಕು ಮತ್ತು ಜೂನಿಯರ್ ವಿಭಾಗದಲ್ಲಿಯೂ ಬಹುಮಾನದ ಪ್ರಮಾಣ ಹೆಚ್ಚಿಸಬೇಕು ಎಂದು ಕೋಣಗಳ ಮಾಲೀಕರು ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಕಂಬಳದಲ್ಲಿ ಭಾಗವಹಿಸುವ ಎಲ್ಲ ಕೋಣಗಳ ಯಜಮಾನರಿಗೆ ಮೈಸೂರು ದಸರಾ ಪ್ರಶಸ್ತಿ ಪತ್ರ, ಸ್ಮರಣಿಕೆ, ಮೈಸೂರು ಪೇಟ ಹಾಗೂ ಶಾಲು ಹೊದಿಸಿ ಗೌರವಿಸಲಾಗುತ್ತದೆ.
*ಉಚಿತ ಪ್ರವೇಶ*
ಸುಮಾರು 15 ಸಾವಿರ ಮಂದಿಗೆ ಗ್ಯಾಲರಿ ವ್ಯವಸ್ಥೆ ,
ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪಾಸ್ ಇಲ್ಲದ ಸುಮಾರು 5 ಸಾವಿರ ಜನರು ನಿಂತುಕೊಂಡು ಕಂಬಳ ವೀಕ್ಷಿಸಲು ಪ್ರತ್ಯೇಕ ಬಯಲು ವಲಯ ನಿರ್ಮಿಸಲಾಗುತ್ತಿದೆ.
ಗ್ಯಾಲರಿಯಲ್ಲಿ ಒಂದೇ ಬಾರಿಗೆ ಸುಮಾರು 15 ಸಾವಿರ ಜನರು ಕುಳಿತು ವೀಕ್ಷಿಸಲು ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೆಚ್ಚಿನ ಜನರಿಗೆ ಅವಕಾಶ ನೀಡುವ ಉದ್ದೇಶದಿಂದ ದಿನವೊಂದಕ್ಕೆ ಮೂರು ಬ್ಯಾಚ್ಗಳಲ್ಲಿ ಉಚಿತ ಪಾಸ್ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಕೋಣಗಳನ್ನು ಕಟ್ಟುವ ಸ್ಥಳದಲ್ಲಿ ಕುಟುಂಬ ಸಮೇತ ಆಗಮಿಸುವ ಪ್ರವಾಸಿಗರು ಕೋಣಗಳೊಂದಿಗೆ ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಪ್ರತ್ಯೇಕ ಅವಕಾಶ ಕಲ್ಪಿಸಲಾಗುತ್ತದೆ. ದೇಶ-ವಿದೇಶಗಳಿಂದ ಪ್ರವಾಸಿಗರು ಸೇರಿದಂತೆ ಒಟ್ಟು 25 ಲಕ್ಷಕ್ಕೂ ಹೆಚ್ಚು ಮಂದಿ ಕಂಬಳ ವೀಕ್ಷಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
*ಕರಾವಳಿ ಆಹಾರ, ಜಾನಪದ ಕಲೆಗಳ ಅನಾವರಣ:*
ಮೈಸೂರು ದಸರಾ ಕಂಬಳದ ಅಂಗವಾಗಿ ಸುಮಾರು 4ರಿಂದ 5 ಎಕರೆ ಪ್ರದೇಶದಲ್ಲಿ ವಿವಿಧ ಮಳಿಗೆಗಳನ್ನು ತೆರೆಯಲಾಗುತ್ತದೆ. ಇಲ್ಲಿ ಕರಾವಳಿಯ ಜಾನಪದ ಕಲೆಗಳು ಹಾಗೂ ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳನ್ನು ಪರಿಚಯಿಸಲಾಗುತ್ತದೆ.
ಕಂಬಳದ ರನ್ನಿಂಗ್ ಕಮೆಂಟರಿಯನ್ನು ಇತರ ಭಾಗದ ಜನರಿಗೂ ಸುಲಭವಾಗಿ ಅರ್ಥವಾಗುವಂತೆ ಕನ್ನಡ ಮತ್ತು ತುಳು ಮಿಶ್ರಿತ ಆಕರ್ಷಕ ಶೈಲಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.
‘ಕಂಬಳ ಆಯೋಜನೆಗೆ ಕಾನೂನು ತೊಡಕಿಲ್ಲ’*&
ಮೈಸೂರು ಕಂಬಳ ಆಯೋಜನೆಗೆ ಕೆಲವರು ವ್ಯಕ್ತಪಡಿಸಿರುವ ಆಕ್ಷೇಪಗಳ ಕುರಿತು ಪ್ರತಿಕ್ರಿಯಿಸಿದ ಶಾಸಕ ಅಶೋಕ್ ಕುಮಾರ್ ರೈ, ದಸರಾ ಮಹೋತ್ಸವವನ್ನು ರಾಜ್ಯ ಸರ್ಕಾರವೇ ಆಯೋಜಿಸುತ್ತಿದ್ದು, ಯುವ ದಸರಾ, ಏರ್ ಶೋ ಹಾಗೂ ವೆಸ್ಟರ್ನ್ ಮ್ಯೂಸಿಕ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾಡಿನ ಸಾಂಪ್ರದಾಯಿಕ ಜಾನಪದ ವೀರ ಕ್ರೀಡೆಯಾದ ಕಂಬಳವನ್ನು ಜಗತ್ತಿಗೆ ಪರಿಚಯಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
ಕೋಣಗಳು ಹಾಗೂ ಕಂಬಳಕ್ಕೆ ಮೈಸೂರು ರಾಜಮನೆತನದೊಂದಿಗೆ ಐತಿಹಾಸಿಕ ನಂಟಿದೆ. ಹಿಂದೆ ಬೆಂಗಳೂರು, ಶಿವಮೊಗ್ಗ ಅಥವಾ ಪಿಲಿಕುಳದಲ್ಲಿ ಕಂಬಳ ನಡೆಸುವುದಕ್ಕೆ ಸಂಬಂಧಿಸಿದಂತೆ ಪ್ರಾಣಿದಯಾ ಸಂಘಟನೆಯೊಂದು ರಿಟ್ ಅರ್ಜಿ ಸಲ್ಲಿಸಿತ್ತು. ಆದರೆ ಹೈಕೋರ್ಟ್ ಆ ಅರ್ಜಿಯನ್ನು ಇತ್ಯರ್ಥಪಡಿಸಿ, ಕಾನೂನುಬದ್ಧವಾಗಿ ಎಲ್ಲಿ ಬೇಕಾದರೂ ಕಂಬಳ ನಡೆಸಲು ಅವಕಾಶ ನೀಡಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಮೈಸೂರು ದಸರಾ ಕಂಬಳಕ್ಕೆ ಯಾವುದೇ ಕಾನೂನು ಅಡೆತಡೆಗಳಿಲ್ಲ ಎಂದು ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ.
*ತುಳುನಾಡು-ಕರುನಾಡು ಬೆಸೆಯುವ ಸಾಂಸ್ಕೃತಿಕ ಸೇತುವೆ*
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳಕ್ಕೆ ಅವಕಾಶ ಕಲ್ಪಿಸುವ ಮೂಲಕ ಸರ್ಕಾರ ಹಾಗೂ ಮುಖ್ಯಮಂತ್ರಿ ತುಳುನಾಡಿನ ಜನಪದ ಕ್ರೀಡೆಗೆ ಜಾಗತಿಕ ಮಟ್ಟದಲ್ಲಿ ಪರಿಚಯ ಸಿಗುವಂತೆ ಮಾಡಿದ್ದಾರೆ ಎಂದು ಹೇಳಿದರು.
ಕಂಬಳ ಕೇವಲ ಮನರಂಜನೆಯ ಕ್ರೀಡೆಯಲ್ಲ. ಅದು ರೈತಾಪಿ ವರ್ಗದ ಶೌರ್ಯ, ಪರಿಶ್ರಮ ಹಾಗೂ ಕರಾವಳಿಯ ಸಂಸ್ಕೃತಿಯ ಪ್ರತೀಕವಾಗಿದೆ. ಬೆಂಗಳೂರಿನಲ್ಲಿ ನಡೆದ ಕಂಬಳಕ್ಕೆ ದೊರೆತ ಯಶಸ್ಸಿನ ಅನುಭವದೊಂದಿಗೆ ಮೈಸೂರಿನಲ್ಲಿಯೂ ಯಾವುದೇ ಲೋಪದೋಷಗಳಿಲ್ಲದೆ ಶಿಸ್ತುಬದ್ಧವಾಗಿ ಕಂಬಳ ನಡೆಸಲಾಗುವುದು ಎಂದು ಅವರು ಹೇಳಿದರು.
ಮೈಸೂರು ದಸರಾ ಕಂಬಳವು ತುಳುನಾಡು ಮತ್ತು ಕರುನಾಡನ್ನು ಬೆಸೆಯುವ ಪ್ರಮುಖ ಸಾಂಸ್ಕೃತಿಕ ಕೊಂಡಿಯಾಗಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ಬೆಳಪು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರಾವಳಿಯ ಮಣ್ಣಿನ ಸೊಗಡು, ಕೋಣಗಳ ಓಟದ ರೋಮಾಂಚನ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಮೈಸೂರು ದಸರಾ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ಈ ಬಾರಿಯ ಕಂಬಳ ವಿಶೇಷ ಆಕರ್ಷಣೆಯಾಗುವ ನಿರೀಕ್ಷೆ ಮೂಡಿಸಿದೆ.












