ಇತ್ತೀಚಿನ ಸುದ್ದಿ
ಕೋಸ್ಟಲ್ ವುಡ್ ಗೆ ಸ್ಯಾಂಡಲ್‌ವುಡ್ ‘ಗೋಲ್ಡನ್ ಸ್ಟಾರ್’ ಕೊಡುಗೆ: ಆಗಸ್ಟ್ 7ರಂದು ‘ಪಿಚ್ಚರ್’ ರಿಲೀಸ್
04/08/2026, 20:06
ಮಂಗಳೂರು(reporterkarnataka.com): ಕನ್ನಡ ಚಿತ್ರರಂಗದ ‘ಗೋಲ್ಡನ್ ಸ್ಟಾರ್’ ಗಣೇಶ್ ಹಾಗೂ ಅವರ ಪತ್ನಿ ಶಿಲ್ಪಾ ಗಣೇಶ್ ಅವರ ನಿರ್ಮಾಣ ಸಂಸ್ಥೆ ಗೋಲ್ಡನ್ ಮೂವಿಸ್ ನಿಂದ ಕನ್ನಡ ಮತ್ತು ತುಳು ಎರಡು ಭಾಷೆಗಳಲ್ಲಿ ನಿರ್ಮಾಣವಾಗಿರುವ ಬಹುನಿರೀಕ್ಷಿತ ತುಳು ಸಿನಿಮಾ ‘ಪಿಚ್ಚರ್’ ಆಗಸ್ಟ್ 7ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.
ತುಳು ಚಿತ್ರರಂಗದಲ್ಲಿ ಈಗಾಗಲೇ ನೂರಾರು ಸಿನಿಮಾಗಳು ಬಂದಿದ್ದರೂ, ಕನ್ನಡದ ಪ್ರಮುಖ ದೊಡ್ಡ ಬ್ಯಾನರ್ ಹಾಗೂ ಖ್ಯಾತ ತಾರೆಯರ ನೇತೃತ್ವದಲ್ಲಿ ತುಳು ಇಂಡಸ್ಟ್ರಿಗೆ ಇಂತಹ ದೊಡ್ಡ ಮಟ್ಟದ ಹೆಜ್ಜೆ ಇಡುತ್ತಿರುವುದು ಇದೇ ಮೊದಲು. ಇದು ತುಳು ಸಿನಿಮಾ ರಂಗದ ಮಾರುಕಟ್ಟೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ.
ಉಡುಪಿ ಮೂಲದ ಶಿಲ್ಪಾ ಗಣೇಶ್ ಅವರ ಕನಸಿನ ಕೂಸು
ಮೂಲತಃ ಉಡುಪಿ ಜಿಲ್ಲೆಯವರಾದ ಹಾಗೂ ತುಳು ಭಾಷಿಕರಾದ ಶಿಲ್ಪಾ ಗಣೇಶ್ ಅವರಿಗೆ ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಒಂದು ಅದ್ಭುತ ಸಿನಿಮಾವನ್ನು ನಿರ್ಮಿಸಬೇಕು ಎಂಬುದು ಬಹುಕಾಲದ ಕನಸಾಗಿತ್ತು. ಗೋಲ್ಡನ್ ಮೂವಿಸ್ ಬ್ಯಾನರ್ ಅಡಿಯಲ್ಲಿ ಈಗಾಗಲೇ ಹಲವು ಯಶಸ್ವಿ ಕನ್ನಡ ಸಿನಿಮಾಗಳನ್ನು ನಿರ್ಮಿಸಿರುವ ಅವರು, ಪತಿ ಗಣೇಶ್ ಅವರ ಬೆಂಬಲದೊಂದಿಗೆ ಈಗ ತುಳು ರಂಗದಲ್ಲೂ ಹೆಜ್ಜೆ ಇಟ್ಟಿದ್ದಾರೆ. ನಿರ್ಮಾಪಕಿ ಶಿಲ್ಪಾ ಗಣೇಶ್ ಅವರ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ತುಳು ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಬಜೆಟ್ ಮಾರುಕಟ್ಟೆ
ಚಿತ್ರದ ಕುರಿತು ಮಾತನಾಡಿರುವ ನಿರ್ಮಾಪಕಿ ಶಿಲ್ಪಾ ಗಣೇಶ್, “ತುಳು ಸಿನಿಮಾಗಳಿಗೆ ಇದುವರೆಗೆ ಇಷ್ಟು ದೊಡ್ಡ ಮಟ್ಟದ ಬಜೆಟ್ ಹಾಗೂ ಮಾರುಕಟ್ಟೆ ಸಿಕ್ಕಿರಲಿಲ್ಲ. ನಾವು ಪ್ರಥಮ ಬಾರಿಗೆ ಆ ಮಾರ್ಕೆಟ್ ಅನ್ನು ಓಪನ್ ಮಾಡಿದ್ದೇವೆ. ಇದು ತುಳು ಸಿನಿಮಾಗಳ ಮಾರುಕಟ್ಟೆಯನ್ನು ದೊಡ್ಡ ಮಟ್ಟಕ್ಕೆ ಬೆಳೆಸಲಿದೆ ಎಂಬ ವಿಶ್ವಾಸವಿದೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ.





ಗಣೇಶ್ ವಿಶೇಷ ಪಾತ್ರ ಹಾಗೂ ಶಿಲ್ಪಾ ಗಣೇಶ್ ಗಾಯನ
ಈ ಸಿನಿಮಾದ ವಿಶೇಷತೆಗಳಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಆಗಿದೆ. ಅಷ್ಟೇ ಅಲ್ಲದೆ, ಚಿತ್ರದಲ್ಲಿ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಕೂಡ ಒಂದು ಹಾಡಿಗೆ ಧ್ವನಿಯಾಗಿದ್ದು, ತಮ್ಮ ಸುಮಧುರ ಧ್ವನಿಯ ಮೂಲಕ ಸಿನಿಮಾಗೆ ಮತ್ತಷ್ಟು ಕಳೆ ತಂದಿದ್ದಾರೆ.
ತುಳು ದಿಗ್ಗಜರ ನಟನೆ ಮತ್ತು ತಾಂತ್ರಿಕ ಬಳಗ
ಈ ಸಿನಿಮಾದಲ್ಲಿ ತುಳು ರಂಗಭೂಮಿ ಹಾಗೂ ಚಿತ್ರರಂಗದ ಹೆಸರಾಂತ ದಿಗ್ಗಜರು, ಹಿರಿಯ ಕಲಾವಿದರು ಹಾಗೂ ಪ್ರತಿಭಾವಂತರು ನಟಿಸಿದ್ದಾರೆ. ನಾಯಕ ನಟನಾಗಿ ನಿತ್ಯ ಪ್ರಕಾಶ್ ಬಂಟ್ವಾಳ್ ನಟಿಸಿದ್ದು, ನಾಯಕಿಯಾಗಿ ಅಮೃತಾ ಕಾಣಿಸಿಕೊಂಡಿದ್ದಾರೆ. ಕಥೆ ಮತ್ತು ಚಿತ್ರಕತೆಯನ್ನು ಸಂದೀಪ್’ ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಚಿತ್ರಕ್ಕೆ ಹಾಸ್ಯ, ಭಾವನೆ ಹಾಗೂ ಎಮೋಷನಲ್ ಸೀನ್‌ಗಳ ಉತ್ತಮ ಮಿಶ್ರಣವಿದೆ.
ಆನಂದ್ ಆಡಿಯೋ ಬಲ ತುಳು ಸಿನಿಮಾಗೆ ದೈತ್ಯ ಮ್ಯೂಸಿಕ್ ಲೇಬಲ್ ಆದ ‘ಆನಂದ್ ಆಡಿಯೋ’ ಸಾಥ್ ನೀಡಿದ್ದು, ಚಿತ್ರದ ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ರೀಚ್ ಆಗಲು ಪ್ರಮುಖ ಕಾರಣವಾಗಿದೆ. ಆನಂದ್ ಆಡಿಯೋ ಸಂಸ್ಥೆ ಹಾಗೂ ಇಡೀ ತಾಂತ್ರಿಕ ಬಳಗದ ಬೆಂಬಲ ಚಿತ್ರದ ಯಶಸ್ಸಿಗೆ ಪ್ರಮುಖ ಬಲವಾಗಿದೆ.
ಈ ಬಗ್ಗೆ ನಿರ್ಮಾಪಕಿ ಶಿಲ್ಪಾ ಗಣೇಶ್ ಮಾತನಾಡಿ “ತುಳು ಸಿನಿಮಾ ಹಾಡುಗಳಿಗೆ ಇದುವರೆಗೂ ಅಂತಹ ದೊಡ್ಡ ಮಟ್ಟದ ಬಜೆಟ್ ಕೊಟ್ಟಿರಲಿಲ್ಲ. ನಾವು ಫಸ್ಟ್ ಟೈಮ್ ಆ ಮಾರ್ಕೆಟ್ ನ ಓಪನ್ ಮಾಡಿದ್ದೇವೆ. ಇದನ್ನು ನಾನು ಹೆಮ್ಮೆಯಿಂದ ಈ ವೇದಿಕೆ ಮೇಲೆ ಹೇಳಿಕೊಳ್ಳೋಕೆ ಇಷ್ಟಪಡ್ತೀನಿ. ಎಲ್ಲಾ ಒಂದು ಕಡೆ ನಾನು ಆ ಬೆಂಚ್‌ಮಾರ್ಕ್ ಅನ್ನು ರೀಚ್ ಆಗಿದ್ದೀನಿ ಅಂತ ಅನ್ಕೊಂಡಿದ್ದೀನಿ. ಇನ್ನು ಮುಂದೆ ಎಲ್ಲಾ ತುಳು ಸಿನಿಮಾಗಳೂ ಉತ್ತಮವಾಗಿ ಹಣ ಗಳಿಸುವಂತಾಗಲಿ. ತುಳು ಚಿತ್ರರಂಗ ಇನ್ನಷ್ಟು ಬೆಳೆಯಲಿ ಎಂದರು.
‘ಗೋಲ್ಡನ್ ಸ್ಟಾರ್’ ಗಣೇಶ್ ಮಾತನಾಡಿ “ತುಳು ಸಿನಿಮಾ ಮಾಡಬೇಕೆಂದು ಶಿಲ್ಪಾ ಹೇಳಿಕೊಂಡಾಗ ಖುಷಿಯಾಗಿ ಪ್ರೋತ್ಸಾಹಿಸಿದೆ. ಸಿನಿಮಾದಲ್ಲಿ ಎಲ್ಲರೂ ಅದ್ಬುತವಾಗಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಅಭಿಪ್ರಾಯಗಳು ಉತ್ತಮವಾಗಿ ಮೂಡಿಬಂದಿದೆ. ಗೋಲ್ಡನ್ ಮೂವಿಸ್ ನಿಂದ ಬರುವ ಸಿನಿಮಾವಾಗಿರುವುದರಿಂದ ಹಾಸ್ಯದ ಜೊತೆಗೆ ಭಾವನಾತ್ಮಕ ಟಚ್ ಇದೆ ಎಂದು ಹೇಳಿದ್ದಾರೆ.
ಸಿನಿಮಾ ನಿರ್ಮಾಣದ ಬಳಿಕ ಸೋಲು ಗೆಲುವು ಮುಖ್ಯವಲ್ಲ. ಈ ಸಿನಿಮಾದಿಂದ ದುಡ್ಡು ಬಂದರೂ ಸಂತೋಷ, ದುಡ್ಡು ಕಳೆದುಕೊಂಡರೂ ಸಂತೋಷ. ಆದರೆ ಪಿಚ್ಚರ್ ಸಿನಿಮಾವನ್ನು ನಾನು ತುಳು ಭಾಷೆಗೊಂದು ಅಳಿಲು ಸೇವೆ ಎಂಬ ರೀತಿಯಲ್ಲಿ ನಿರ್ಮಿಸಿದ್ದೇನೆ ಎಂದು ಗಣೇಶ್ ತಿಳಿಸಿದ್ದಾರೆ.












