ಇತ್ತೀಚಿನ ಸುದ್ದಿ
ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ ಸ್ವಾಗತ
18/04/2026, 22:58
ಬೆಂಗಳೂರು(reporterkarnataka.com): ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು ಬೆಂಗಳೂರಿಗೆ ಆಗಮಿಸಿದೆ, ಬನ್ನೇರುಘಟ್ಟ ಮೃಗಾಲಯಕ್ಕೆ 4 ಚೀತಾಗಳನ್ನು ತರಲಾಗಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ತಡರಾತ್ರಿ ಸ್ವಾಗತ ಕೋರಿದರು. ಇವುಗಳಲ್ಲಿ 2 ಗಂಡು ಚೀತಾಗಳು ಮತ್ತು 2 ಹೆಣ್ಣು ಚೀತಾಗಳು ಸೇರಿವೆ. ಕರ್ನಾಟಕ ಅರಣ್ಯ ಇಲಾಖೆ ವಿಶೇಷ ಯೋಜನೆಯಡಿ ಈ ಚೀತಾಗಳನ್ನು ತರಿಸಿ, ಬೆಂಗಳೂರಿನ ಪ್ರಸಿದ್ಧ ಮೃಗಾಲಯದಲ್ಲಿ ನೆಲೆಗೊಳಿಸುತ್ತಿದೆ.
ನಿನ್ನೆ ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಚೀತಾಗಳು ಬಂದಿಳಿದಿವೆ. ತಡರಾತ್ರಿ ಬಂದಿದ್ದರೂ, ಅವುಗಳನ್ನು ಬರಮಾಡಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ವತಃ ಹಾಜರಿದ್ದರು.



ವಿಮಾನದಿಂದ ಇಳಿಯುವ ಕ್ಷಣದಿಂದಲೇ ಚೀತಾಗಳನ್ನು ಅತ್ಯಂತ ಎಚ್ಚರಿಕೆಯಿಂದ, ನಿಯಮದಂತೆ, ಸುರಕ್ಷಿತವಾಗಿ ಮೃಗಾಲಯದ ಕಡೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು. ದಕ್ಷಿಣ ಆಫ್ರಿಕಾದಂತಹ ದೂರದ ದೇಶದಿಂದ ಬರುವ ಪ್ರಾಣಿಗಳಿಗೆ ಹವಾಮಾನ, ವಾತಾವರಣ, ಆಹಾರ, ನೀರು ಹೀಗೆ ಹಲವು ವಿಷಯಗಳಲ್ಲಿ ಬದಲಾವಣೆಗಳು ಎದುರಾಗುತ್ತವೆ. ಈ ಹವಾಮಾನ ಬದಲಾವಣೆಯಿಂದ ಚೀತಾಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯದ ದೃಷ್ಟಿಯಿಂದಲೂ ಅವುಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ವೈದ್ಯರ ತಂಡ ಸದಾ ನಿಗಾ ವಹಿಸುತ್ತಿದೆ.
ಭಾರತದಲ್ಲಿ ಹೊಂದುಕೊಳ್ಳುವುದಕ್ಕೆ ಸೂಕ್ತ ಕ್ರಮ
ಹೊಸ ದೇಶ, ಹೊಸ ಪರಿಸರ, ಹೊಸ ಜನ ಇವೆಲ್ಲಕ್ಕಿಂತ ಮೊದಲು ಚೀತಾಗಳು ಇಲ್ಲಿ ಹೊಂದಿಕೊಳ್ಳಬೇಕಿರುವುದರಿಂದ ಅವುಗಳನ್ನು ನೇರವಾಗಿ ಇತರ ಮೃಗಗಳ ನಡುವೆ ಬಿಡದೇ, ಮೊದಲಿಗೆ ಪ್ರತ್ಯೇಕವಾಗಿ ಇಡಲಾಗುತ್ತಿದೆ. ನಿಯಮದಂತೆ 30 ದಿನಗಳ ಕಾಲ ಈ ಚೀತಾಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ಕ್ವಾರಂಟೈನ್ ಅಂದರೆ, ಇತರ ಪ್ರಾಣಿಗಳ ಸಂಪರ್ಕದಿಂದ ದೂರವಾಗಿ, ಪ್ರತ್ಯೇಕ ಸ್ಥಳದಲ್ಲಿ ಇಟ್ಟು, ಅವುಗಳ ಆರೋಗ್ಯವನ್ನು ನಿಜವಾದ ಗಮನದಿಂದ ಪರೀಕ್ಷಿಸುವ ಅವಧಿಯಾಗಿದೆ.
*30 ದಿನಗಳ ಕಾಲ ಚೀತಾಗಳಿಗೆ ಕ್ವಾರಂಟೈನ್!*
ಈ 30 ದಿನಗಳ ಅವಧಿಯಲ್ಲಿ ಚೀತಾಗಳ ಆಹಾರ, ನಡೆ-ನುಡಿಗಳು, ಆರೋಗ್ಯ, ರೋಗ ಲಕ್ಷಣಗಳ ಬಗ್ಗೆ ಪ್ರತಿದಿನವೂ ದಾಖಲೆ ಮಾಡಲಾಗುತ್ತದೆ. ಅವುಗಳಿಗೆ ಬೇಕಾದಷ್ಟು ವಿಶ್ರಾಂತಿ, ಸ್ವಚ್ಛವಾದ ವಾತಾವರಣ, ಸಮಯಕ್ಕೆ ಸರಿಯಾದ ಆಹಾರ ಮತ್ತು ನೀರು ಕೊಡಲಾಗುತ್ತದೆ. ಹವಾಮಾನ ತಾಪಮಾನವು ತೀವ್ರವಾಗಿ ಬದಲಾಗದಂತೆ ವಿಶೇಷ ಕೊಠಡಿಗಳನ್ನು ಸಿದ್ಧಪಡಿಸಿ, ಅವುಗಳಿಗೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಲಾಗಿದೆ. ದಕ್ಷಿಣ ಆಫ್ರಿಕಾದ ಹವಾಮಾನಕ್ಕೆ ಹೊಂದಿಕೊಂಡಿದ್ದ ಈ ಚೀತಾಗಳು ಹೀಗೆ ನಿಧಾನವಾಗಿ ನಮ್ಮ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳಲು ಸಹಾಯವಾಗುತ್ತದೆ.
ಚೀತಾಗಳನ್ನು ನೋಡಿಕೊಳ್ಳಲು ವಿಶೇಷವಾಗಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರ ಕೆಲಸ, ದಿನದ 24 ಗಂಟೆಗಳಲ್ಲೂ ಚೀತಾಗಳ ಮೇಲೆ ಕಣ್ಣಿಟ್ಟುಕೊಂಡು, ಯಾವುದೇ ಅಸಹಜ ವರ್ತನೆ ಕಂಡರೂ ತಕ್ಷಣ ವೈದ್ಯರಿಗೆ ತಿಳಿಸುವುದು. ಹೀಗೆ ನಿರಂತರ ನಿಗಾ ಹಾಗೂ ಆರೈಕೆಯಿಂದ ಚೀತಾಗಳನ್ನು ಆರೋಗ್ಯಕರವಾಗಿ ಬೆಳೆಸುವ ಉದ್ದೇಶ ಅರಣ್ಯ ಇಲಾಖೆಯದ್ದಾಗಿದೆ.
*ಬನ್ನೇರುಘಟ್ಟ ಮೃಗಾಲಯಕ್ಕೆ ಹೊಸ ಆಕರ್ಷಣೆ*
ದಕ್ಷಿಣ ಆಫ್ರಿಕಾದಿಂದ ಬಂದಿರುವ ಈ 4 ಚೀತಾಗಳು ಬನ್ನೇರುಘಟ್ಟ ಮೃಗಾಲಯಕ್ಕೆ ಹೊಸ ಆಕರ್ಷಣೆ ಆಗಲಿವೆ. ಕ್ವಾರಂಟೈನ್ ಅವಧಿ ಮುಗಿದ ನಂತರ, ಮೃಗಾಲಯಕ್ಕೆ ಬರುವ ಜನರಿಗೆ ಅವುಗಳನ್ನು ನಿಯಮಿತವಾಗಿ ವೀಕ್ಷಿಸುವ ಅವಕಾಶ ದೊರೆಯಲಿದೆ. ಆದರೆ ಅದಕ್ಕೂ ಮುನ್ನ, ಅವುಗಳ ಆರೋಗ್ಯ ಮತ್ತು ಸುರಕ್ಷತೆ ಮೊದಲ ಆದ್ಯತೆಯಾಗಿರುವುದರಿಂದ, ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹೀಗೆ, ದೂರದ ದಕ್ಷಿಣ ಆಫ್ರಿಕಾದಿಂದ ಬಂದ ಈ ಚೀತಾಗಳು ಈಗ ಬೆಂಗಳೂರಿನ ಹೊಸ ಅತಿಥಿಗಳಾಗಿ ಎಲ್ಲರ ಮನಸೆಳೆಯಲು ಸಿದ್ಧವಾಗಿವೆ.














