ಇತ್ತೀಚಿನ ಸುದ್ದಿ
ನಂಜನಗೂಡು | ಹರತಲೆ ಗ್ರಾಮದ ಶ್ರೀ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವ ಸಂಭ್ರಮ
03/02/2026, 20:18
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಶಕ್ತಿ ದೇವತೆ ಶ್ರೀ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಚಿಕ್ಕದೇವಮ್ಮ ದೇವಾಲಯದ ಶ್ರೀ ಅಮ್ಮನವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಗ್ರಾಮದ ಹೊರಭಾಗದಲ್ಲಿ ಶ್ರೀ ಚಿಕ್ಕದೇವಮ್ಮ ಅವರ ಉತ್ಸವ ಮೂರ್ತಿಯನ್ನಿರಿಸಿ ಕಳಶಗಳನ್ನು ಪ್ರತಿಷ್ಠಾಪಿಸಿ ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಪೂಜೆ ನಂತರ ಕಳಶಗಳನ್ನು ಗ್ರಾಮದ ಹೆಣ್ಣು ಮಕ್ಕಳು ಹೊತ್ತು ತರುವ ಮೂಲಕ ಹಾಲರವಿ ಉತ್ಸವವನ್ನು ನಡೆಸಲಾಯಿತು.
ಮಂಗಳ ವಾದ್ಯ, ಛತ್ರಿ, ಚಾಮರ ಸತ್ತಿಗೆ ಸುರಪಾನಿಗಳೊಂದಿಗೆ ಹಾಲರವಿ ಉತ್ಸವದ ಜೊತೆಗೆ ವಿಶೇಷವಾಗಿ ಅಲಂಕರಿಸಲಾಗಿದ್ದ ಕುದುರೆ ವಾಹನದ ಮೇಲೆ ಶಕ್ತಿ ದೇವತೆ ಶ್ರೀ ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಗೆ ಗ್ರಾಮದ ಮುಖಂಡರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಆದ ಚಿಕ್ಕರಂಗನಾಯಕ ಅವರು ಉತ್ಸವಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ಟ್ರ್ಯಾಕ್ಟರ್ ಓಡಿಸುವ ಮೂಲಕ ಚಾಲನೆ ನೀಡಿದರು.










ಮೆರವಣಿಗೆ ಉದ್ದಕ್ಕೂ ದೇವರ ಗುಡ್ಡಪ್ಪಂದರಿಗೆ ಪ್ರತಿ ಮನೆಯಿಂದಲೂ ತಣ್ಣೀರು ಹಾಕಿ ಅರಿಶಿಣ ಕುಂಕುಮ ಹಚ್ಚಿ ಬಳೆ ತೊಡಿಸಿ ಬಾಗಿನ ಅರ್ಪಿಸುತ್ತಿದ್ದು, ವಿಶೇಷವಾಗಿತ್ತು.
ಶ್ರೀ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವಕ್ಕೆ ವಿವಿಧಡೆಯಿಂದ ಸಾವಿರಾರು ಭಕ್ತರು ಭಾಗವಹಿಸಿ ತಮ್ಮ ಭಕ್ತಿ ನಮನ ಸಲ್ಲಿಸಿದರು. ಬಂದ ಎಲ್ಲಾ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಳಿಕ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕರಂಗನಾಯಕ ಹಾಗೂ ದೇವರ ಗುಡ್ಡಪ್ಪ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು.














