ಇತ್ತೀಚಿನ ಸುದ್ದಿ
*ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟ ಪ್ರತಿಭಟನೆಗೆ ಅನುಮತಿ: ಕಂಡಿಷನ್ಸ್ ಅಪ್ಲೈ!*
28/10/2026, 09:16
ನವದೆಹಲಿ(reporterkarnataka.com): ಮತಗಳ್ಳತನದ ಆರೋಪ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರ್ಯಾಲಿ ನಡೆಸಲು ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲಾಗಿದ್ದು, ಜನಸಂದಣಿ ನಿಯಂತ್ರಣ, ಸಿಸಿಟಿವಿ ಕಣ್ಗಾವಲು, ಭಾಷಣಗಳು ಮತ್ತು ವಾಹನ ನಿಲುಗಡೆ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುವುದರ ಜತೆಗೆ, ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳಿಗೆ ಉತ್ತರದಾಯಿತ್ವ ನಿಗದಿಪಡಿಸಬೇಕು ಎಂಬುದು ಪ್ರತಿಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ. ಈ ರ್ಯಾಲಿಗೆ ದೇಶದಾದ್ಯಂತ ಸುಮಾರು 10 ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದೆ.
*ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ರ್ಯಾಲಿ*
ರಾಮಲೀಲಾ ಮೈದಾನವನ್ನು ಅಕ್ಟೋಬರ್ 25ರಿಂದ ನವೆಂಬರ್ 3ರವರೆಗೆ ಕಾಯ್ದಿರಿಸಲು ದೆಹಲಿ ಪೊಲೀಸರು ನಿರಾಕ್ಷೇಪಣಾ ಪ್ರಮಾಣಪತ್ರ ನೀಡಿದ್ದಾರೆ. ಆದರೆ, ಮೈದಾನದ ಮಾಲೀಕತ್ವ ಹೊಂದಿರುವ ಪ್ರಾಧಿಕಾರದ ಅನುಮತಿಯೂ ಅಗತ್ಯವಾಗಿದೆ. ಮುಖ್ಯ ರ್ಯಾಲಿಯನ್ನು ನವೆಂಬರ್ 1ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಸಲು ನಿರ್ಧರಿಸಲಾಗಿದೆ. ನಿಗದಿತ ಸಮಯ ಮುಗಿದ ಕೂಡಲೇ ಜನರನ್ನು ಸ್ಥಳದಿಂದ ಹೊರ ಕಳುಹಿಸುವ ಪ್ರಕ್ರಿಯೆ ಆರಂಭಿಸಬೇಕು. ಯಾವುದೇ ಕಾರಣಕ್ಕೂ ಕಾರ್ಯಕ್ರಮವನ್ನು ಸಂಜೆ 5 ಗಂಟೆಯ ನಂತರ ಮುಂದುವರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರ್ಯಾಲಿಗೂ ಮೊದಲು ಅಥವಾ ನಂತರ ಮೈದಾನದಲ್ಲಿ ಯಾರೂ ರಾತ್ರಿ ತಂಗುವಂತಿಲ್ಲ. ಬಸ್, ಕಾರು, ಟೆಂಪೊ ಸೇರಿದಂತೆ ಎಲ್ಲ ವಾಹನಗಳನ್ನು ಸಂಚಾರ ಪೊಲೀಸರ ಸೂಚನೆಯಂತೆ ನಿಗದಿಪಡಿಸಿದ ಸ್ಥಳಗಳಲ್ಲೇ ನಿಲುಗಡೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.












