ಇತ್ತೀಚಿನ ಸುದ್ದಿ
ಕಬ್ಬು ರೈತರ ಜತೆ ಡಿಕೆಶಿ ಸಂಧಾನ ಯಶಸ್ವಿ: ತಡರಾತ್ರಿ ಪರಿಹಾರ ಸೂತ್ರ ರೂಪಿಸಿದ ಮುಖ್ಯಮಂತ್ರಿ
28/10/2026, 14:13
ಬೆಂಗಳೂರು(reporterkarnataka.com): ತೀವ್ರ ಸ್ವರೂಪ ಪಡೆದುಕೊಂಡಿದ್ದ ಕಬ್ಬು ದರ ವಿವಾದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ಪರಿಹಾರ ಸೂತ್ರ ಸಿಕ್ಕಿದೆ. ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆದ ಸುದೀರ್ಘ ಮಾತುಕತೆ ಸೋಮವಾರ ಮಧ್ಯರಾತ್ರಿ ಯಶಸ್ವಿಯಾಗಿ ಅಂತ್ಯಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲು ರೈತರು ಮತ್ತು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ನಿಗದಿಪಡಿಸಿದ ಬಳಿಕ, ಅದರ ಆಧಾರದ ಮೇಲೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ದರ ನಿಗದಿ ಮಾಡುವ ಕುರಿತು ಸಿಎಂ ಸಂಧಾನ ಸಭೆಯಲ್ಲಿ ಒಮ್ಮತ ಮೂಡಿದೆ. ಸಕ್ಕರೆಯ ಎಂಎಸ್‌ಪಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲು ಹಾಗೂ ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
*10 ತಾಸು, ಐದು ಸುತ್ತಿನ ಸಭೆ*
ಸೋಮವಾರ ಬೆಳಗ್ಗೆ ಸುವರ್ಣ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಆರಂಭವಾದ ಮಾತುಕತೆ, ಬಳಿಕ ಸರ್ಕಿಟ್ ಹೌಸ್‌ನಲ್ಲೂ ಮುಂದುವರಿಯಿತು. ಸುಮಾರು 10 ತಾಸು, ಐದು ಸುತ್ತು ನಡೆದ ಮಾತುಕತೆಯಲ್ಲಿ 9 ಸಚಿವರು, 70ಕ್ಕೂ ಹೆಚ್ಚು ಶಾಸಕರು, 80 ಕಾರ್ಖಾನೆಗಳ ಪೈಕಿ 79 ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು. ರೈತರು ಮತ್ತು ಕಾರ್ಖಾನೆ ಮಾಲೀಕರು ತಮ್ಮ ಬೇಡಿಕೆಗಳ ಮೇಲೆ ಪಟ್ಟು ಹಿಡಿದಿದ್ದರೂ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕೆಂಬ ನಿಲುವಿನಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸತತ ಮಾತುಕತೆ ನಡೆಸಿದರು. ಸುವರ್ಣ ವಿಧಾನಸೌಧದ ಸಭೆಯ ಬಳಿಕವೂ ಮಾತುಕತೆ ನಿಲ್ಲಿಸದೆ ಸರ್ಕಿಟ್ ಹೌಸ್‌ನಲ್ಲಿ ಮತ್ತೆರಡು ಸುತ್ತಿನ ಚರ್ಚೆ ನಡೆಸಿ ಸಂಧಾನ ಸೂತ್ರ ರೂಪಿಸಿದರು.
ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ, ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಂದದ ಹತ್ತಿರ ಬಂದಿದ್ದಾರೆ. ರೈತರು ಎರಡು ದಿನ ಕಾಲಾವಕಾಶ ಕೇಳಿದ್ದು, ತಮ್ಮಲ್ಲೇ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ರೈತರು ಉಳಿಯಬೇಕು, ಕಾರ್ಖಾನೆಗಳೂ ಉಳಿಯಬೇಕು. ರೈತರ ಬದುಕು ಸರ್ಕಾರಕ್ಕೆ ಮುಖ್ಯ. ಕೇಂದ್ರ ಸಚಿವರು ನೀಡಿದ ಭರವಸೆಯ ಮೇಲೆ ರೈತರಿಗೆ ವಿಶ್ವಾಸವಿದೆ. ಕೇಂದ್ರದೊಂದಿಗೆ ನಾವೂ ಮಾತುಕತೆ ನಡೆಸುತ್ತೇವೆ. ಸರ್ಕಾರ ರೈತರ ಪರವಾಗಿ ನಿಲ್ಲಲಿದೆ ಎಂದು ತಿಳಿಸಿದರು.












