ಇತ್ತೀಚಿನ ಸುದ್ದಿ
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157 ಪೆಡ್ಲರ್ ಗಳ ಬಂಧನ
29/07/2026, 19:53
ಮಂಗಳೂರು(reporterkarnataka.com): ಮಂಗಳೂರು ನಗರ ಪೊಲೀಸ್ ವತಿಯಿಂದ ವಶಪಡಿಸಿಕೊಂಡಿರುವ ಸುಮಾರು ₹82 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ ಮಾಡಲಾಗಿದೆ.


2026ನೇ ಸಾಲಿನಲ್ಲಿ ಇದುವರೆಗೆ 87 ಎನ್.ಡಿ.ಪಿ.ಎಸ್. ಪ್ರಕರಣಗಳನ್ನು ದಾಖಲಿಸಿ 157 ಪೆಡ್ಲರ್ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಗಳಲ್ಲಿ ರೂ.8,18,30,130/- ಮೌಲ್ಯದ 148 ಕೆ.ಜಿ. 615 ಗ್ರಾಂ ಗಾಂಜಾ, 7 ಕೆ.ಜಿ 165 ಗ್ರಾಂ ಎಂ.ಡಿ.ಎಂ.ಎ., 1 ಕೆಜಿ 705 ಗ್ರಾಂ ಹೈಡ್ರೋ ವೀಡ್ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ವ್ಯಕ್ತಿಗಳ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಲಾಗಿದೆ.
ಜುಲೈ 29 ರಂದು ಬೆಳಿಗ್ಗೆ 11.00 ಗಂಟೆಗೆ ಮಂಗಳೂರು ನಗರದ ಮುಲ್ಕಿಯ ಕೊಲ್ನಾಡು ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ Ramky Energy and Environment Ltd (Re Sustainability Healthcare Solutions Ltd.) ಸಂಸ್ಥೆಯಲ್ಲಿ, ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಮಾನ್ಯ ನ್ಯಾಯಾಲಯದ ಅನುಮತಿಯೊಂದಿಗೆ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ಮಾದಕ ವಸ್ತು ನಾಶಪಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ 16 ಪೊಲೀಸ್ ಠಾಣೆಗಳ 59 ಎನ್.ಡಿ.ಪಿ.ಎಸ್. ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ಕೆಳಕಂಡ ಮಾದಕ ವಸ್ತುಗಳನ್ನು Drug Disposal Committee ಸಮಕ್ಷಮ ನಾಶಪಡಿಸಲಾಯಿತು.
*•*450 ಕೆ.ಜಿ ಗಾಂಜಾ*
•*43 ಕೆ.ಜಿ. 260 ಗ್ರಾಂ ಎಂ.ಡಿ. ಎಂ.ಎ.*
•*80 ಗ್ರಾಂ ಚರಸ್*
•*880 ಗ್ರಾಂ ಹೈಡ್ರೋ ವೀಡ್ ಗಾಂಜಾ*
•*1 ಕೆ.ಜಿ. 200 ಗ್ರಾಂ ಭಾಂಗ್*
ಒಟ್ಟಾರೆ ಸುಮಾರು ₹82 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸುಟ್ಟು ನಾಶಪಡಿಸಿ ವಿಲೇವಾರಿ ಮಾಡಲಾಯಿತು.
ನಾಶಪಡಿಸಲಾದ ಮಾದಕ ವಸ್ತುಗಳಲ್ಲಿ ಪ್ರಮುಖವಾಗಿ 2024ನೇ ಸಾಲಿನಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಸುಮಾರು ₹ 75 ಕೋಟಿ ಮೌಲ್ಯದ 37 ಕೆ.ಜಿ. ಎಂ.ಡಿ.ಎಂ.ಎ., 2025ನೇ ಸಾಲಿನಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಅಂದಾಜು ₹ 4.47 ಕೋಟಿ ಮೌಲ್ಯದ ಸುಮಾರು 4 ಕೆ.ಜಿ. ಎಂ.ಡಿ.ಎಂ.ಎ., ಕೊಣಾಜೆ ಪೊಲೀಸ್ ಠಾಣೆಯ ಸುಮಾರು ₹ 20 ಲಕ್ಷ ಮೌಲ್ಯದ 106 ಕೆ.ಜಿ. ಗಾಂಜಾ ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಯ ಸುಮಾರು ₹ 36 ಲಕ್ಷ ಮೌಲ್ಯದ 111 ಕೆ.ಜಿ. ಗಾಂಜಾ ಸೇರಿವೆ.
ಸಾರ್ವಜನಿಕರು ಮಾದಕ ವಸ್ತುಗಳಿಗೆ ಸಂಬಂದಿಸಿದ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯಿಂದ ಸೃಜನೆ ಮಾಡಲಾಗಿರುವ ಕ್ಯೂ.ಅರ್ ಕೋಡ್ ಮೂಲಕ ಅಥವಾ ಪೊಲೀಸ್ ಕಂಟ್ರೋಲ್ ರೂಮ್ 112 / 9480802321 ಮಾಹಿತಿ ನೀಡುವುದು.












