ಇತ್ತೀಚಿನ ಸುದ್ದಿ
ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಏರು ರಸ್ತೆ ಹಾನಿ; ಏಕಮುಖ ಸಂಚಾರ ಜಾರಿ
08/07/2026, 20:41
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ನಿರಂತರ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಮಡಿಕೇರಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಏರು ರಸ್ತೆಯ ಬಳಿ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದ ರಸ್ತೆ ಬದಿಯ ಪಾದಚಾರಿ ಮಾರ್ಗ ಕೊಚ್ಚಿಹೋಗಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಗರಸಭೆಯಿಂದ ಸುಮಾರು ರೂ.35 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಪಾದಚಾರಿ ಮಾರ್ಗ ಮಳೆಯ ನೀರಿನ ರಭಸಕ್ಕೆ ಕೊಚ್ಚಿಹೋಗಿರುವುದು ಗಮನಾರ್ಹವಾಗಿದೆ.

ಭೂಕುಸಿತದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ, ಮಡಿಕೇರಿ ನಗರ ಟ್ರಾಫಿಕ್ ಪೊಲೀಸರು ತಕ್ಷಣದಿಂದಲೇ ಏಕಮುಖ (ಒನ್‌ವೇ) ಸಂಚಾರ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದರಂತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಳೆ ಖಾಸಗಿ ಬಸ್ ನಿಲ್ದಾಣದ ಕಡೆಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಹಾಗೂ ವಾಹನ ಸವಾರರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪರಿಸ್ಥಿತಿಯನ್ನು ಸಂಬಂಧಪಟ್ಟ ಇಲಾಖೆಗಳು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.












