ಇತ್ತೀಚಿನ ಸುದ್ದಿ
ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ
19/04/2026, 23:36
ಬೆಂಗಳೂರು(reporterkarnataka.com): ಮೈಸೂರಿನ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಚಿರತೆ ಮಂಚದಡಿ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದ ಸೊಸೆ ಸುಜಾತಾ ಅವರ ಸಾಹಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಚಿರತೆಯಿಂದ ಅತ್ತೆ ಕಾಪಾಡಿದ ಸೊಸೆ ಪವಿತ್ರಾ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡುವ ಭರವಸೆಯನ್ನೂ ನೀಡಿದ್ದಾರೆ. ಈ ಘಟನೆ ಆಕಸ್ಮಿಕವಾದರೂ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಸಚಿವರು ಬಣ್ಣಿಸಿದ್ದಾರೆ. ತಮ್ಮ ಮನೆಯ ಮಂಚದಡಿ ಚಿರತೆ ಅಡಗಿರುವುದು ತಿಳಿಯುತ್ತಿದ್ದಂತೆಯೇ, ಪ್ರಾಣದ ಹಂಗು ತೊರೆದು ಕೊಠಡಿಗೆ ನುಗ್ಗಿ, ವಯಸ್ಸಾದ ಅತ್ತೆಯನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಹೊರಗೆ ಕರೆತಂದ ಸುಜಾತಾ ಅವರ ಸಾಹಸ ನಿಜಕ್ಕೂ ರೋಮಾಂಚನಕಾರಿ. ಸಾಕ್ಷಾತ್ ಮೃತ್ಯುವಿನ ದವಡೆಯಿಂದ ಅತ್ತೆಯನ್ನ ರಕ್ಷಿಸಿದ ಅವರ ಸಮಯಪ್ರಜ್ಞೆ ಇಡೀ ಮಹಿಳಾ ಕುಲಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.












