ಇತ್ತೀಚಿನ ಸುದ್ದಿ
ಹೊರಹಾಕಲ್ಪಟ್ಟ ಬಾಂಗ್ಲಾದೇಶಿಯರ ಬಗ್ಗೆ ಶ್ವೇತಪತ್ರ ಹೊರಡಿಸಿ: ರಾಜ್ಯದ ಬಿಜೆಪಿ ನಾಯಕರಿಗೆ ಐವನ್ ಡಿಸೋಜ ಸವಾಲು
14/07/2026, 22:06
ಬೆಂಗಳೂರು(reporterkarnataka.com): ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂದು ದಿನದೊಳಗೆ ಬಾಂಗ್ಲಾ ವಲಸಿಗರನ್ನು ಹೊರ ಹಾಕುವುದಾಗಿ ಹೇಳಲಾಗಿತ್ತು. ಅಧಿಕಾರಕ್ಕೆ ಬಂದು 2 ತಿಂಗಳಾಯಿತು. ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಅಸ್ಸಾಂನಿಂದ, ಆಗ್ನೇಯ ರಾಜ್ಯಗಳಿಂದ ಎಷ್ಟು ಮಂದಿ ಬಾಂಗ್ಲಾದೇಶಿಯರನ್ನು ಹೊರ ಹಾಕಲಾಗಿದೆ ಎಂಬ ಶ್ವೇತಪತ್ರ ಹೊರಡಿಸುವಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ರಾಜ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ನಗರದ ಲಾಲ್‌ಬಾಗ್‌ನಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದ ವಲಸಿಗರಿಗೆ ರಕ್ಷಣೆ ಕಾಂಗ್ರೆಸ್ ರಕ್ಷಣೆ ನೀಡಿರುವುದೇ ಅಥವಾ ಬಿಜೆಪಿ ನೀಡಿರುವುದೇ ಎಂಬುದು ಅಂಕಿಅಂಶಗಳಿಂದ ಬಯಲಾಗುತ್ತದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಲು ಬಿಜೆಪಿ ನಾಯಕರು ಕೇಂದ್ರವನ್ನು ಒತಾಯಿಸಬೇಕು ಎಂದರು.
ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ 10 ವರ್ಷಗಳ ಅವಧಿಯಲ್ಲಿ 83,000 ಮಂದಿ ಗುರುತಿಸಿ ಬಾಂಗ್ಲಾದೇಶಿಯರನ್ನು ಗುರುತಿಸಿ ಅವರನ್ನು ಹೊರಗಟ್ಟುವ ಕಾರ್ಯ ಮಾಡಿರುವ ಕೀರ್ತಿ ಕಾಂಗ್ರೆಸ್ ಪಕ್ಷದ್ದು. ಇದನ್ನು ಬಿಜೆಪಿಯ ನಾಯಕರು ತಿಳಿಯಬೇಕು. ಚರಿತ್ರೆ ತಿಳಿಯಬೇಕು. ಕೇಂದ್ರದಲ್ಲಿ ಕಳೆದ 12 ವರ್ಷಗಳಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ಮೋದಿಯವರ ಸರಕಾರ ಈವರೆಗೆ ಹೊರಹಾಕಿದ ಬಾಂಗ್ಲಾದೇಶಿಯರ ಸಂಖ್ಯೆ ಕೇವಲ 8000. ಈ ಬಗ್ಗೆ ಬಿಜೆಪಿಯ ನಾಯಕರಾದ ಕ್ಯಾ. ಬ್ರಿಜೇಶ್ ಚೌಟ, ವಿಜಯೇಂದ್ರ ಅವರಿಗೆ ತಿಳಿದಿರಬೇಕು ಎಂದವರು ಹೇಳಿದರು.
ವಲಸಿಗರ ಹೆಸರಿನಲ್ಲಿ ಮುಸ್ಲಿಂ ಬಾಂಧವರು, ಅಲ್ಪಸಂಖ್ಯಾತರಿಗೆ ಅವಮಾನ ಮಾಡುವ ಕೆಲಸವಾಗುತ್ತಿದೆ. ನೈಜ ಮತದಾರರನ್ನು ಹೊರಗಿಡುವ ಹುನ್ನಾರ ಬಿಜೆಪಿ ನಡೆಯುತ್ತಿದೆ. ನುಸುಳುಕೋರರನ್ನು ತಡೆಯುವುದು ಕಾಂಗ್ರೆಸ್ ಕೆಲಸವೋ, ಬಿಜೆಪಿಯದ್ದೋ, ರಾಜ್ಯ ಸರಕಾರದ ಜವಾಬ್ಧಾರಿಯೇ ಅಥವಾ ಕೇಂದ್ರದ್ದೇ ಎಂಬುದನ್ನು ಬಿಜೆಪಿ ನಾಯಕರು ತಿಳಿಸಬೇಕು. ಅಧಿಕಾರ ನಿಮ್ಮ ಕೈಯ್ಯಲ್ಲಿದ್ದು, ಗಡಿ ಪ್ರದೇಶದಲ್ಲಿ ನುಸುಳುಕೋರರ ಯಥೇಚ್ಛವಾಗಿ ಒಳ ಬರಲು ಅವಕಾಶ ನೀಡಿ, ಅವರನ್ನು ದೇಶದೆಲ್ಲೆಡೆ ಸುತ್ತಾಡಲು ಬಿಟ್ಟು ವಿಪಕ್ಷದ ಮೇಲೆ ಗೂಬೆ ಕೂರಿಸುವುದನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದವರು ಹೇಳಿದರು.
ಸುರತ್ಕಲ್‌ನಲ್ಲಿ, ಮಂಗಳೂರಿನಲ್ಲಿ ಬಾಂಗ್ಲಾದೇಶಿಯರ ಪತ್ತೆಯಲ್ಲಿ ನಮ್ಮ ಸರಕಾರ ಕೆಲಸ ಮಾಡಿದೆ. ಬಾಂಗ್ಲಾ ದೇಶಿಯರಿಗೆ ನಾವು ರಕ್ಷಣೆ ಮಾಡಿದ್ದೇವೆಂಬ ಆರೋಪದ ಬಗ್ಗೆ ಒಂದು ಉದಾಹರಣೆ ತೋರಿಸಿ ಎಂದು ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.












