3:54 AM Tuesday14 - July 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;…

ಇತ್ತೀಚಿನ ಸುದ್ದಿ

120 ಕೋಟಿ ಮೌಲ್ಯದ ಆದಿಚುಂಚನಗಿರಿ ಮಠದ ಜಮೀನು ಕಬಳಿಕೆ: ಡೆಪ್ಯುಟಿ ತಹಶೀಲ್ದಾರ್ ಸಹಿತ11 ಮಂದಿ ಬಂಧನ

14/07/2026, 21:30

ಬೆಂಗಳೂರು(reporterkarnataka.com): ರಾಜ್ಯ ರಾಜಧಾನಿಯ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಅತ್ಯಂತ ರೋಚಕ ವಂಚನೆ ಪ್ರಕರಣವೊಂದನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಕಬಳಿಸಲು ನಕಲಿ ವಂಶವೃಕ್ಷ ಸೃಷ್ಟಿಸಿ, ಸ್ಮಶಾನದಲ್ಲಿ ಸಮಾಧಿ ಹುಡುಕಿ ಸ್ಕೆಚ್ ಹಾಕಿದ್ದ ಬೃಹತ್ ಜಾಲವೊಂದನ್ನು ಪೊಲೀಸರು ಮಟ್ಟಹಾಕಿದ್ದಾರೆ.
ಈ ವಂಚನೆ ಜಾಲದಲ್ಲಿದ್ದ 6 ಜನ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 11 ಜನ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮಠಕ್ಕೆ ಸೇರಿದ ಬರೋಬ್ಬರಿ ₹120 ಕೋಟಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ತಮ್ಮ ಹೆಸರಿಗೆ ಮಾಡಿಕೊಂಡು ಕಬಳಿಸಿದ್ದರು.

*ಮಠದ ಆಸ್ತಿ ಮತ್ತು ವಂಚನೆಯ ಹಿನ್ನೆಲೆ:*
ಸುಮಾರು 30 ವರ್ಷಗಳ ಹಿಂದೆ ಭಕ್ತಾದಿಗಳು ಆದಿಚುಂಚನಗಿರಿ ಮಠಕ್ಕೆ ಕಾಣಿಕೆ ರೂಪದಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಕಂಬಳಿಪುರ ಗ್ರಾಮದ ಸರ್ವೆ ನಂಬರ್ 43 ರಲ್ಲಿ ಒಟ್ಟು 45 ಎಕರೆ ಜಮೀನನ್ನು ನೀಡಿದ್ದರು. ಮಠದ ಹೆಸರಿನಲ್ಲಿದ್ದ ಈ 45 ಎಕರೆಯ ಪೈಕಿ 6 ಎಕರೆ ಜಮೀನನ್ನು ಗುರಿಯಾಗಿಸಿಕೊಂಡ ಖದೀಮರ ದಂಡು, ಖಾಸಗಿ ಬ್ರೋಕರ್‌ಗಳು ಮತ್ತು ಪ್ರಭಾವಿ ಸರ್ಕಾರಿ ಅಧಿಕಾರಿಗಳೊಂದಿಗೆ ಕೈಜೋಡಿಸಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿತ್ತು.

*ಸ್ಮಶಾನದಲ್ಲಿ ಸಮಾಧಿ ಹುಡುಕಿ ಸ್ಕೆಚ್ ಹಾಕಿದ ಮಾಸ್ಟರ್ ಮೈಂಡ್!*
ಕೆಂಗೇರಿ ಪೊಲೀಸರು ಈ ಪ್ರಕರಣದ ಸುರುಳಿ ಬಿಡಿಸಿದ ಹಾದಿ ಅತ್ಯಂತ ರೋಚಕವಾಗಿದೆ. ಪೊಲೀಸರ ತನಿಖೆಯಲ್ಲಿ ಬಯಲಾಗಿರುವ ದೊಡ್ಡ ಕಥೆಯೇ ಇದೆ. ನೆಲಮಂಗಲ ಮೂಲದ ನರೇಶ್ ಗೌಡ ಈ ಇಡೀ ವಂಚನೆ ಪ್ರಕರಣದ ಮಾಸ್ಟರ್ ಮೈಂಡ್. ಮಠದ ಜಾಗವನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ಈತ, ತನ್ನ ಪ್ಲಾನ್ ಅನ್ನು ಬ್ರೋಕರ್ ಆರೋಗ್ಯಸ್ವಾಮಿ ಎಂಬಾತನಿಗೆ ತನ್ನ ಯೋಜನೆಯನ್ನು ವಿವರಿಸಿದ್ದ. ಮಠದ ಜಮೀನಿನ ಮೂಲ ಮಾಲೀಕರ ಹೆಸರಿಗೆ ಹೊಂದಾಣಿಕೆಯಾಗುವ ಮತ್ತೊಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಇವರಿಬ್ಬರಿಗೆ ಸವಾಲಾಗಿತ್ತು. ಅದಕ್ಕಾಗಿ ಇವರು ನೇರವಾಗಿ ಸ್ಮಶಾನಕ್ಕೆ ಲಗ್ಗೆ ಇಟ್ಟಿದ್ದರು! ಸ್ಮಶಾನದಲ್ಲಿ ಜಮೀನಿನ ಮೂಲ ಮಾಲೀಕನ ಹೆಸರನ್ನು ಹೊಂದಿದ್ದ ಸಮಾಧಿಯೊಂದನ್ನು ಪತ್ತೆಹಚ್ಚಿ, ಅವರ ಕುಟುಂಬಸ್ಥರ ವಿವರ ಕಲೆಹಾಕಿದ್ದರು. ಇದೇ ವೇಳೆ ಬೇಗೂರು ಪೊಲೀಸ್ ಠಾಣೆಯ ರೌಡಿಶೀಟರ್ ಫ್ರಾನ್ಸಿಸ್ ಎಂಬಾತ ಇವರಿಗೆ ಸಿಕ್ಕಿದ್ದ. ಈತನ ತಂದೆಯ ಹೆಸರು ಹಾಗೂ ಮಠದ ಜಮೀನಿನ ಮೂಲ ಮಾಲೀಕನ ಹೆಸರು ಮತ್ತು ವಯಸ್ಸು ಕಾಕತಾಳೀಯವೆಂಬತೆ ಕರೆಕ್ಟ್ ಮ್ಯಾಚ್ ಆಗ್ತಿತ್ತು. ಇದನ್ನು ಬಳಸಿಕೊಂಡ ನರೇಶ್ ಗೌಡ ಮತ್ತು ತಂಡ, ರೌಡಿಶೀಟರ್ ಫ್ರಾನ್ಸಿಸ್ ಹಾಗೂ ಆತನ ತಂಗಿ ಜೋಸ್ವಾನ್ ಇಬ್ಬರೇ ಮೂಲ ಮಾಲೀಕನ ವಾರಸುದಾರರು ಎಂದು ಬಿಂಬಿಸುವ ನಕಲಿ ವಂಶವೃಕ್ಷ (Family Tree) ಮತ್ತು ಸಾಲಾವಳಿ ಪತ್ರಗಳನ್ನು ಸೃಷ್ಟಿಸಿದ್ದರು.

*ಕೈಜೋಡಿಸಿದ ಸರ್ಕಾರಿ ಅಧಿಕಾರಿಗಳು: ನಕಲಿ ದಾರಿಗೆ ಸಿಕ್ಕಿತು ಸರ್ಕಾರಿ ಸೀಲು!*
ಈ ನಕಲಿ ದಾಖಲೆಗಳಿಗೆ ಸರ್ಕಾರಿ ಕಚೇರಿಯಲ್ಲಿ ಮುದ್ರೆ ಒತ್ತಿಸಲು ಲಂಚದ ಹಣದ ಹೊಳೆಯೇ ಹರಿದಿತ್ತು. ಹಂತ ಹಂತವಾಗಿ ಇಲಾಖೆಯ ಅಧಿಕಾರಿಗಳು ಹಣ ಪಡೆದು ವಂಚನೆಗೆ ಸಾಥ್ ನೀಡಿದ್ದರು. ಮೊದಲ ಹಂತವಾಗಿ ಬೇಗೂರು ವಿಲೇಜ್ ಅಕೌಂಟೆಂಟ್ ಶಿವಪ್ರಸಾದ್, ರೆವಿನ್ಯೂ ಇನ್ಸ್‌ಪೆಕ್ಟರ್ ಕಿರಣ್ ಹಾಗೂ ಡೆಪ್ಯೂಟಿ ತಹಶೀಲ್ದಾರ್ ದೀಪಕ್ ಭಾರಿ ಪ್ರಮಾಣದ ಲಂಚ ಪಡೆದು ನಕಲಿ ವಂಶವೃಕ್ಷಕ್ಕೆ ಅನುಮೋದನೆ ನೀಡಿದ್ದರು. ಎರಡನೇ ಹಂತವಾಗಿ ಈ ನಕಲಿ ದಾಖಲೆಗಳನ್ನು ಆಧರಿಸಿ ಕೆಂಗೇರಿಯ ವಿಲೇಜ್ ಅಕೌಂಟೆಂಟ್ ಸತೀಶ್ ಕುಮಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಹಾಗೂ ಡೆಪ್ಯೂಟಿ ತಹಶೀಲ್ದಾರ್ ಅವರು ನಕಲಿ ದಾಖಲಾತಿ ಎಂದು ಗೊತ್ತಿದ್ದರೂ ಕೂಡ ಪೌತಿ ಖಾತೆ (Mutation) ಮಾಡಿಕೊಟ್ಟಿದ್ದರು. ಖಾತೆ ಮಾಡಿಸಿಕೊಂಡ ಬೆನ್ನಲ್ಲೇ ಆರೋಪಿಗಳು ಕೋರ್ಟ್‌ನಿಂದ ಆದೇಶಗಳನ್ನು ಪಡೆದು, ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಬೇರೊಬ್ಬ ಮೂರನೇ ವ್ಯಕ್ತಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಕೂಡ ಮಾಡಿಬಿಟ್ಟಿದ್ದರು!

*ಸಿಕ್ಕಿಬಿದ್ದ ಆರೋಪಿಗಳು ಯಾರು?*
ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, ಈ ಪೈಕಿ 11 ಜನರನ್ನು ಕೆಂಗೇರಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಗ್ಯಸ್ವಾಮಿ (ಬ್ರೋಕರ್), ಫ್ರಾನ್ಸಿಸ್ (ರೌಡಿಶೀಟರ್), ಜೋಸ್ವಾನ್ ಹಾಗೂ ಶ್ರೀನಿವಾಸ ನರೇಂದ್ರ ಬಂಧಿತ ಖಾಸಗಿ ವ್ಯಕ್ತಿಗಳಾಗಿದ್ದಾರೆ. ಶಿವಪ್ರಸಾದ್ (ಬೇಗೂರು ವಿಎ), ಕಿರಣ್ (ಬೇಗೂರು ಆರ್‌ಐ), ದೀಪಕ್ (ಬೇಗೂರು ಡೆಪ್ಯೂಟಿ ತಹಶೀಲ್ದಾರ್), ಸತೀಶ್ ಕುಮಾರ್ (ಕೆಂಗೇರಿ ವಿಎ), ಅರುಣ್ ಕುಮಾರ್ (ಕೆಂಗೇರಿ ಆರ್‌ಐ) ಹಾಗೂ ಕೆಂಗೇರಿಯ ಡೆಪ್ಯೂಟಿ ತಹಶೀಲ್ದಾರ್ ಬಂಧಿತ ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ಪ್ರಕರಣದ ಮುಖ್ಯ ರೂವಾರಿ ನೆಲಮಂಗಲದ ನರೇಶ್ ಗೌಡ ಸದ್ಯ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಬೆಂಗಳೂರಿನ ಸುತ್ತಮುತ್ತ ಸಕ್ರಿಯವಾಗಿದೆ ದಂಧೆಕೋರರ ಜಾಲ: ಡಿಸಿಪಿ ಅನಿತಾ ಹದ್ದಣ್ಣನವರ್

ಈ ಹೈಪ್ರೊಫೈಲ್ ಪ್ರಕರಣದ ಯಶಸ್ವಿ ಪತ್ತೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಅವರು ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. “ಮಠದ 45 ಎಕರೆ ಜಮೀನಿನ ಪೈಕಿ 6 ಎಕರೆಯನ್ನು ನಕಲಿ ದಾಖಲೆಗಳು, ನಕಲಿ ವಂಶವೃಕ್ಷ ಹಾಗೂ ನಕಲಿ ಸಾಲಾವಳಿ ಪತ್ರಗಳ ಮೂಲಕ ಕಬಳಿಸಲು ಸಂಚು ರೂಪಿಸಲಾಗಿತ್ತು. ತನಿಖೆ ವೇಳೆ ಕಂದಾಯ ಇಲಾಖೆಯ ರೆಕಾರ್ಡ್ ರೂಮ್ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿ ಹಾಗೂ ಉಪ ತಹಸೀಲ್ದಾರ್ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳ ಶಾಮೀಲಾತಿ ಬೆಳಕಿಗೆ ಬಂದಿದೆ. ಸದ್ಯ 11 ಜನರನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಬೆಂಗಳೂರಿನ ಸುತ್ತಮುತ್ತ ಇಂತಹದ್ದೇ ವ್ಯವಸ್ಥಿತ ಭೂ ಕಬಳಿಕೆ ಜಾಲ ಸಕ್ರಿಯವಾಗಿರುವ ಶಂಕೆ ಇದ್ದು, ಇಂತಹ ಭೂ ಮಾಫಿಯಾಗಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲಾಗುವುದು.” ಎಂದರು. ಕೋಟಿ ಬೆಲೆಬಾಳುವ ಪವಿತ್ರ ಮಠದ ಆಸ್ತಿಯನ್ನೇ ನುಂಗಲು ಹೋದ ಭೂಗಳ್ಳರು ಕೊನೆಗೂ ಪೊಲೀಸರ ತನಿಖಾ ಜಾಲಕ್ಕೆ ಬಿದ್ದು ಕಂಬಿ ಎಣಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು