ಇತ್ತೀಚಿನ ಸುದ್ದಿ
ನಾನು ಮೈಸೂರಿನ ಅಳಿಯ, ಮತ್ತೊಮ್ಮೆ ಬಲಿಷ್ಠ ಸರ್ಕಾರಕ್ಕೆ ಅವಕಾಶ ನೀಡಿ’: ಸಿಎಂ ಡಿಕೆ ಶಿವಕುಮಾರ್ ಮನವಿ
01/08/2026, 20:24
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
“ನಾನು ಮೈಸೂರಿನ ಅಳಿಯ. ನನಗೆ ಕನಕಪುರ ಬೇರೆ ಅಲ್ಲ, ಮೈಸೂರು ಬೇರೆ ಅಲ್ಲ. ಮುಖ್ಯಮಂತ್ರಿ ಆದರೂ ನಾನು ಮೈಸೂರು ಅಳಿಯನೇ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಲಿಷ್ಠ ಸರ್ಕಾರ ರಚಿಸಲು ಜನರು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ರೋಡ್ ಶೋ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಲಿಷ್ಠ ಸರ್ಕಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು.
“ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಪ್ರೀತಿ, ಅಭಿಮಾನದಿಂದ ಸ್ವಾಗತಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ಮತ್ತು ಸಿದ್ದರಾಮಯ್ಯ ಅವರು ಇಡೀ ರಾಜ್ಯ ಪ್ರವಾಸ ಮಾಡಿ 136 ಸ್ಥಾನಗಳನ್ನು ಗೆದ್ದಿದ್ದೇವೆ. ಚುನಾವಣೆಗೂ ಮುನ್ನ ಚಾಮುಂಡೇಶ್ವರಿ ತಾಯಿಯ ಬಳಿ ದೊಡ್ಡ ಜವಾಬ್ದಾರಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ತಾಯಿಯ ಆಶೀರ್ವಾದದಿಂದ ಜನರು ಅವಕಾಶ ನೀಡಿದ್ದಾರೆ” ಎಂದು ಹೇಳಿದರು.ಬೆಲೆ ಏರಿಕೆಯಿಂದ ಜನರ ಆದಾಯ ಕುಸಿದಿದ್ದ ಸಂದರ್ಭದಲ್ಲಿ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಇಂದು ದೇಶಕ್ಕೆ ಮಾದರಿಯಾಗಿವೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಭೇಟಿ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.
2028ರಲ್ಲಿಯೂ ಇದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಬರಗಾಲದ ನಡುವೆಯೂ ವರುಣನ ಕೃಪೆಯಿಂದ ಪರಿಸ್ಥಿತಿ ಸುಧಾರಿಸಿದೆ ಎಂದರು. ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡುವ ವಿಚಾರದ ಕುರಿತು ಮಾತನಾಡಿದ ಸಿಎಂ, ಪ್ರತಿಪಕ್ಷಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಚಾಮುಂಡೇಶ್ವರಿ ತಾಯಿಯ ಕೃಪೆಯಿಂದ ನೀರು ಬಿಡುವ ಆತಂಕ ದೂರವಾಗಿದೆ ಎಂದು ಹೇಳಿದರು.
ಈ ವೇಳೆ ಕಾರಂಜಿ ಕೆರೆ ವೃತ್ತದಿಂದ ಕುರುಬಾರಹಳ್ಳಿ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದರು.












