ಇತ್ತೀಚಿನ ಸುದ್ದಿ
ಬೆಳ್ಳಂಬೆಳಗ್ಗೆ ಮಂಗಳೂರು ಹಳೆ ಬಂದರಿಗೆ ಮುಖ್ಯಮಂತ್ರಿ ದಿಢೀರ್ ಭೇಟಿ: ಮೀನುಗಾರರ ಮನದ ಮಾತಿಗೆ ಕಿವಿಗೊಟ್ಟ ಸಿಎಂ ಡಿ. ಕೆ. ಶಿವಕುಮಾರ್
19/09/2026, 16:00
*ನ್ಯಾಯಬದ್ಧ ವ್ಯಾಪಾರ ಆಗಬೇಕು, ಮೀನುಗಾರರ ಸಮುದಾಯ ಅಭಿವೃದ್ಧಿಯಾಗಬೇಕು*
*ವ್ಯಾಪಾರ ನಿಲ್ಲಿಸಿದ್ದವರ ವಿರುದ್ಧ ಕ್ರಮ*
*ಬಂದರಿನ ಅಭಿವೃದ್ಧಿ ಕುರಿತು ಮೀನುಗರಾರು ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ*
*ಅಕ್ರಮ ಕಾಪೌಂಡ್ ಹಾಕಿರುವವರ ವಿರುದ್ಧ ಕ್ರಮ*
*ಆರ್ ಅಶೋಕ್ ಅವರಿಗೆ ಮೀನು ಕಳುಹಿಸಿ ಆಸೆ ತೀರಿಸೋಣ*
ಮಂಗಳೂರು(reporterkarnataka.com): ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿ ಹೊಸ ಅಧ್ಯಾಯ ಬರೆದಿರುವ ಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ಬೆಳ್ಳಂ ಬೆಳಗ್ಗೆ ಮಂಗಳೂರು ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರ ಮನದ ಮಾತುಗಳಿಗೆ ಕಿವಿಗೊಟ್ಟರು.
ಬೆಳಗ್ಗೆ 6 ಗಂಟೆಗೆ ಬಂದರಿಗೆ ಭೇಟಿ ನೀಡಿದ ಸಿಎಂ, ಬಂದರು ಪ್ರದೇಶವನ್ನು ಕಣ್ಣಾರೆ ಕಂಡರು. ಬೋಟ್ ನಲ್ಲಿ ಪ್ರಯಾಣ ಮಾಡಿ ಬಂದರು ಅಭಿವೃದ್ಧಿಗೆ ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಮೀನುಗಾರರ ಮುಖಂಡರಿಂದ ಮಾಹಿತಿ ಪಡೆದರು.
“ಸದ್ಯ 200 ಬೋಟ್ ಗಳಿಗೆ ಡಾಕ್ ವ್ಯವಸ್ಥೆ ಇದ್ದು, ಫಲ್ಗುಣಿ, ನೇತ್ರಾವತಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ತ್ರಿವೇಣಿ ಸಂಗಮ ಜಾಗದಲ್ಲಿ ಬೋಟ್ ಗಳಿಗೆ ಹೊಸ ಡಾಕ್ ಗಳನ್ನು ಮಾಡಿದರೆ ಹೆಚ್ಚಿನ ಬೋಟ್ ಗಳ ನಿಲ್ದಾಣಕ್ಕೆ ಅವಕಾಶವಾಗುತ್ತದೆ. ಇದಕ್ಕಾಗಿ ಡ್ರೆಡ್ಜಿಂಗ್ (ಹೂಳೆತ್ತುವುದು) ಮಾಡಬೇಕಾಗಿದೆ. 25 ವರ್ಷಗಳಿಂದ ಡ್ರೆಡ್ಜಿಂಗ್ ಆಗಿಲ್ಲ, ಎರಡು ನದಿ ಹಾಗೂ ಅಳಿವೆ ಬಾಗಿಲಲ್ಲಿ ಡ್ರೆಡ್ಜಿಂಗ್ ಮಾಡಬೇಕಾಗಿದೆ” ಎಂದು ಮೀನುಗರರ ಸಂಘದ ಮಾಜಿ ಅಧ್ಯಕ್ಷ ಚೇತನ್ ಬೆಂಗ್ರೆ ಹಾಗೂ ಮೋಹನ್ ಬೆಂಗ್ರೆ ಅವರು ಸಿಎಂಗೆ ವಿವರಿಸಿದರು.
“ಬಂದರಿನ ತಟ ಪ್ರದೇಶದಲ್ಲಿ ಮರಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ತೆಗೆಯಬೇಕು. ಈ ಭಾಗದಲ್ಲಿ ಎಲ್ಲಿ ಆಳವಾದ ಜಾಗ ಇದೆ ಎಂದು ಚಾನಲ್ ಮಾರ್ಕಿಂಗ್ ಬಾಯ್ಸ್ ಗಳನ್ನು ಹಾಕಿದರೆ ಬೋಟ್ ಗಳು ಸುಗಮವಾಗಿ ಸಾಗಲು ನೆರವಾಗುತ್ತದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ವ್ಯಾಪಾರ ಸ್ಥಗಿತ; ಸಿಎಂ ಸಿಡಿಮಿಡಿ*
ಇನ್ನು ಸಿಎಂ ಭೇಟಿ ಹಿನ್ನೆಲೆಯಲ್ಲಿ ಬಂದರಿನಲ್ಲಿ ವ್ಯಾಪಾರ ಮಾಡಲು ಮೀನುಗಾರರಿಗೆ ಅವಕಾಶ ನೀಡದಿರುವುದನ್ನು ಗಮನಿಸಿದ ಸಿಎಂ ಸಿಡಿಮಿಡಿಗೊಂಡರು. ಯಾವುದೇ ಕಾರಣಕ್ಕೂ ವ್ಯಾಪಾರ ನಿಲ್ಲಬಾರದು. ಇದರಿಂದ ಮೀನುಗಾರರು ಹಾಗೂ ವ್ಯಾಪಾರಿಗಳ ಜೀವನಕ್ಕೆ ತೊಂದರೆಯಾಗಲಿದೆ. ಯಾಕೆ ವ್ಯಾಪಾರ ಪ್ರಾರಂಭಿಸಿ” ಎಂದು ಸೂಚಿಸಿದರು.












